
ಡೈಲಿ ವಾರ್ತೆ: 17/NOV/2025
ಗಡಿಪಾರಿನಿಂದ ಮಹೇಶ್ ಶೆಟ್ಟಿ ತಿಮರೋಡಿ ಪಾರು – ಗಡಿಪಾರು ಆದೇಶವನ್ನು ರದ್ದುಗೊಳಿಸಿದ ಹೈ ಕೋರ್ಟ್

ಮಂಗಳೂರು: ಸಾಮಾಜಿಕ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧದ ಗಡಿಪಾರು ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಯಚೂರಿನ ಮಾನ್ವಿಗೆ ಗಡಿಪಾರು ಆದೇಶ ಪ್ರಶ್ನಿಸಿ ಮಹೇಶ್ ಶೆಟ್ಟಿ ತಿಮರೋಡಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಪುರಸ್ಕರಿಸಿದ್ದು, ಗಡಿಪಾರು ಆದೇಶವನ್ನು ರದ್ದು ಮಾಡಿ ಆದೇಶ ಹೊರಡಿಸಿದೆ. ಅಲ್ಲದೇ ಸೂಕ್ತ ಕಾರಣ, ಸೆಕ್ಷನ್‌ಗಳೊಂದಿಗೆ ಹೊಸದಾಗಿ ವಿಚಾರಣೆ ನಡೆಸಿ 15 ದಿನಗಳಲ್ಲಿ ಆದೇಶ ನೀಡಲು ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ಉಪ ವಿಭಾಗಾಧಿಕಾರಿಗೆ ಸೂಚನೆ ನೀಡಿದೆ.
ಧರ್ಮಸ್ಥಳದ ಬುರುಡೆ ಪ್ರಕರಣ ಹಾಗೂ ಸೌಜನ್ಯ ಪ್ರಕರಣದಲ್ಲಿ ಹೋರಾಟ ನಡೆಸುತ್ತಿದ್ದ ಸಾಮಾಜಿಕ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಯನ್ನು ಮಂಗಳೂರಿನಿಂದ ಗಡಿಪಾರು ಮಾಡಿ ಸಪ್ಟೆಂಬರ್ 20ರಂದೇ ಪುತ್ತೂರು ಸಹಾಯಕ ಆಯುಕ್ತ ಸ್ಟೆಲ್ಲಾ ವರ್ಗೀಸ್ ಆದೇಶ ಹೊರಡಿಸಿದ್ದರು.
ಮಹೇಶ್ ತಿಮರೋಡಿ ವಿರುದ್ಧ ಸುಮಾರು 32 ವಿವಿಧ ಪ್ರಕರಣಗಳು ದಾಖಲಾಗಿದ್ದವು. ಹೀಗಾಗಿ ಮಹೇಶ್ ಶೆಟ್ಟಿ ತಿಮರೋಡಿಯನ್ನು ಗಡಿಪಾರು ಮಾಡುವಂತೆ ಆಗ್ರಹಗಳು ವ್ಯಕ್ತವಾಗಿದ್ದವು. ಇದರ ಬೆನ್ನಲ್ಲೇ ಮಹೇಶ್ ಶೆಟ್ಟಿ ತಿಮರೋಡಿಯನ್ನು ಒಂದು ವರ್ಷಗಳ ಕಾಲ ರಾಯಚೂರಿನ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿತ್ತು. ಆದರೆ ಇದನ್ನು ಪ್ರಶ್ನಿಸಿ ಮಹೇಶ್ ಶೆಟ್ಟಿ ತಿಮರೋಡಿ ಅವರು ಹೈಕೋರ್ಟ್ ಮೊರೆ ಹೋಗಿದ್ದರು