
ಡೈಲಿ ವಾರ್ತೆ: 19/NOV/2025
ಯಕ್ಷಗಾನ ಕಲಾವಿದರಲ್ಲಿ ಬಹುತೇಕರು ಸಲಿಂಗಿ ಕಾಮಿಗಳು: ಪುರುಷೋತ್ತಮ್ ಬಿಳಿಮಲೆ ವಿವಾದಾತ್ಮಕ ಹೇಳಿಕೆ

ಮೈಸೂರು : ಯಕ್ಷಗಾನ ಕಲಾವಿದರಲ್ಲಿ ಬಹುತೇಕರು ಸಲಿಂಗಿಗಳು. ಅಲ್ಲಿ ಅಂತಹ ಅನಿವಾರ್ಯತೆ ಇತ್ತು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ್ ಬಿಳಿಮಲೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮೈಸೂರಿನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಸ್ತ್ರೀವೇಷದ ಕಲಾವಿದ ಏನಾದರೂ ಸಲಿಂಗಕಾಮಕ್ಕೆ ನಿರಾಕರಿಸಿದರೆ, ಭಾಗವತರು ಮರು ದಿವಸ ಅವರಿಗೆ ಪದ್ಯವನ್ನೇ ಕೊಡುತ್ತಿರಲಿಲ್ಲ. ವೇದಿಕೆಯ ಮೇಲೆ ಅವನ ವಿರುದ್ಧ ಸೇಡು ತೀರಿಸಿಕೊಳ್ಳಲಾಗುತ್ತಿತ್ತು. ಮೇಳದಲ್ಲಿ ಅವಕಾಶ ಇಲ್ಲದೆ ಹೋದರೆ ಬದುಕೇ ಇಲ್ಲವೆಂಬ ಒತ್ತಡದಲ್ಲಿ ಕಲಾವಿದರು ಇರುತ್ತಿದ್ದರು ಎಂದರು.
ಸತ್ಯವನ್ನು ಹೇಳಲು ಹಿಂಜರಿಯಬಾರದು. ಕಲಾವಿದರು ಮೇಳಕ್ಕೆಂದು ಆರೆಂಟು ತಿಂಗಳು ತಿರುಗಾಟದಲ್ಲೇ ಇರುವುದರಿಂದ, ಅವರಿಗೆ ಯಾರೂ ಹೆಣ್ಣು ಕೊಡುತ್ತಿರಲಿಲ್ಲ. ಅಲ್ಲಿನ ಸ್ತ್ರೀ ವೇಷಧಾರಿಗಳೂ ಒತ್ತಡದಲ್ಲಿರುತ್ತಿದ್ದರು. ಅವರ ಮೇಲೆ ಇತರರಿಗೆ ಮೋಹ ಇರುತ್ತಿತ್ತು ಎಂದು ಅವರು ಹೇಳಿದರು.
ಆಗೆಲ್ಲ ಕಲಾವಿದ ಮೇಳಕ್ಕೆಂದು ಹೋಗಿ ವಾಪಸಾದಾಗ ಹಲವರಿಗೆ ಮನೆಯೇ ಇರುತ್ತಿರಲಿಲ್ಲ. ಅಂತಹ ದುರಂತ ಕಾವ್ಯಗಳು ಅವರ ಬದುಕಿನಲ್ಲಿವೆ. ಅವನ್ನು ಗ್ರಹಿಸುವ ಶಕ್ತಿ ಸಮಾಜಕ್ಕೆ ಇಲ್ಲವಾಗಿದೆ. ಹಾಡಿನ ಚಪ್ಪಾಳೆಯಷ್ಟೇ ಮುಖ್ಯವಾಗಬಾರದು. ಅವರ ಬದುಕಿನ ಬಿಕ್ಕಟ್ಟಿನ ಕಾವ್ಯಕ್ಕೆ ಅಕ್ಷರಸ್ಥರು, ವಿದ್ವಾಂಸರು ದನಿಯಾಗಬೇಕು ಎಂದರು.