
ಡೈಲಿ ವಾರ್ತೆ: 22/NOV/2025
ಶಿರಿಯಾರ ವ್ಯವಸಾಯ ಸೇವಾ ಸಹಕಾರಿ ಸಂಘದ ವಿರುದ್ಧ ಕಿಡಿಗೇಡಿಗಳಿಂದ ಅಪಪ್ರಚಾರ – ಅಧ್ಯಕ್ಷ ಪ್ರದೀಪ್ ಬಲ್ಲಾಳ್ ಅವರಿಂದ ಸ್ಪಷ್ಟೀಕರಣ

ಕೋಟ: ಬ್ರಹ್ಮಾವರ ತಾಲೂಕಿನ ಸಾಹೇಬರಕಟ್ಟೆ ಶಿರಿಯಾರ ವ್ಯವಸಾಯ ಸೇವಾ ಸಹಕಾರಿ ಸಂಘದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಕೆಲವು ಸುಳ್ಳು ಸುದ್ದಿಗಳು ಹಾಗೂ ಸಂಸ್ಥೆಯ ಭದ್ರತೆಯನ್ನು ಪ್ರಶ್ನಿಸುವ ಸಂದೇಶಗಳು ಹರಿದಾಡುತ್ತಿದ್ದು ಈ ಬಗ್ಗೆ ಅಧ್ಯಕ್ಷ ಪ್ರದೀಪ್ ಬಲ್ಲಾಳ್ ಅವರಿಂದ ಮಾಧ್ಯಮದವರ ಮುಂದೆ ಸ್ಪಷ್ಟೀಕರಣ ನೀಡಿದ್ದಾರೆ.
ಮಾಧ್ಯಮ ದೊಂದಿಗೆ ಮಾತನಾಡಿ ಅವರು
ಇತ್ತೀಚೆಗೆ ನಮ್ಮ ಸಂಘದ ಕಾವಡಿ ಶಾಖೆಯಲ್ಲಿ ಸುರೇಶ್ ಭಟ್ ಹಾಗೂ ಹರೀಶ್ ಕುಲಾಲ್ ಎನ್ನುವ ಸಿಬ್ಬಂದಿಗಳಿಬ್ಬರು ರೂ. 1ಕೋಟಿ 70 ಲಕ್ಷ ಹಣ ದುರುಪಯೋಗ ನಡೆಸಿದ್ದು ಈ ಘಟನೆಯ ಅನಂತರ ಸಾರ್ವಜನಿಕ ವಲಯದಲ್ಲಿ ಕೆಲವು ಸುಳ್ಳು ಸುದ್ದಿಗಳು ಹಾಗೂ ಸಂಸ್ಥೆಯ ಭದ್ರತೆಯನ್ನು ಪ್ರಶ್ನಿಸುವ ಸಂದೇಶಗಳು ಹರಿದಾಡುತ್ತಿದ್ದು ಈ ಬಗ್ಗೆ ಸ್ಪಷ್ಟಿಕರಣವನ್ನು ನೀಡುತ್ತಿದ್ದೇವೆ.
ಕಾವಡಿ ಶಾಖೆಯಲ್ಲಿ ಕಾಯನಿರ್ವಹಿಸುತ್ತಿದ್ದ ಈ ಇಬ್ಬರು ಸಿಬ್ಬಂದಿಗಳು ರೂ. 1ಕೋಟಿ 70 ಲಕ್ಷ ಹಣ ದುರುಪಯೋಗಪಡಿಸಿ ಕೊಂಡಿದ್ದು ಈ ಬಗ್ಗೆ ಮಾಹಿತಿ ತಿಳಿದ ತತ್ ಕ್ಷಣ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಕೋಟ ಪೊಲೀಸ್ ಠಾಣೆಯಲ್ಲಿ 0205/2025 ಕೇಸ್ ನಂಬ್ರದಡಿ ಪ್ರಕರಣ ದಾಖಲಿಸಿದ್ದಾರೆ ಹಾಗೂ ಪೊಲೀಸರು ಕಾನೂನು ಕ್ರಮಕೈಗೊಂಡು ಓರ್ವ ಆರೋಪಿಯನ್ನು ಬಂಧಿಸಿದ್ದು ಇನ್ನೋರ್ವ ಆರೋಪಿಗೆ ಶೋಧ ನಡೆಸುತ್ತಿದ್ದಾರೆ.
ಈ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಕೂಡ ಪ್ರಕಟವಾಗಿದೆ. ಸಹಕಾರಿ ನಿಯಮಾವಳಿಯಂತೆ ಆ ಇಬ್ಬರು ಸಿಬ್ಬಂದಿಗಳನ್ನು ಈಗಾಗಲೇ ಅಮಾನತುಗೊಳಿಸಿದ್ದು ನಿಗದಿತ ಅವಧಿಯ ಅನಂತರ ವಜಾಗೊಳಿಸಲಿದ್ದೇವೆ. ಮುಂದೆ ಸಂಘದ ಸಹಕಾರಿ ನಿಯಮಾವಳಿಯಂತೆ ದುರುಪಯೋಗಪಡಿಸಿಕೊಂಡ ಹಣವನ್ನು ಒಂದು ರೂಪಾಯಿ ಕಡಿಮೆ ಇಲ್ಲದಂತೆ ಮರುಪಾವತಿ ಮಾಡಿಸಿಕೊಳ್ಳಲು ಸೂಕ್ತ ಕ್ರಮ ಕೈಗೊಳ್ಳುತ್ತಿದ್ದೇವೆ.
ಹಣ ದುರುಪಯೋಗ ಪ್ರಕರಣ ಗಮನಕ್ಕೆ ಬಂದ ತತ್‌ಕ್ಷಣ ಗ್ರಾಹಕರ ಸುರಕ್ಷತೆ ನಿಟ್ಟಿನಲ್ಲಿ ಸಂಘದ ಇತರ ಎಲ್ಲ ಶಾಖೆಗಳಲ್ಲಿರುವ ಎಲ್ಲ ಠೇವಣಿ, ಚಿನ್ನಾಭರಣಗಳನ್ನು ಆಂತರಿಕ ಪರಿಶೀಲನೆ ನಡೆಸಿದ್ದು ಎಲ್ಲವೂ ಕ್ರಮಬದ್ದವಾಗಿದ್ದು ಗ್ರಾಹಕರಿಗೆ ಯಾವುದೇ ಭಯ ಬೇಡ. ಕಾವಡಿ ಶಾಖೆಯಲ್ಲಿ ವ್ಯವಹಾರ ನಡೆಸುವ ಬಹುತೇಕ ಗ್ರಾಹಕರು ಶಾಖೆಗೆ ಆಗಮಿಸಿ ತಮ್ಮ ಠೇವಣಿ ಹಾಗೂ ಅಡವಿಟ್ಟ ಚಿನ್ನಾಭರಣಗಳನ್ನು ಪರಿಶೀಲಿಸಿದ್ದು ಎಲ್ಲವೂ ಸುರಕ್ಷಿತವಾಗಿರುವ ಬಗ್ಗೆ ದೃಢಪಡಿಸಿಕೊಂಡಿದ್ದಾರೆ. ಹೀಗೆ ನಮ್ಮ ಯಾವುದೇ ಶಾಖೆಯಲ್ಲಿ ವ್ಯವಹಾರ ನಡೆಸುವ ಗ್ರಾಹಕರಿಗೆ ತಮ್ಮ ಠೇವಣಿ, ಅಡವಿಟ್ಟ ಚಿನ್ನಾಭರಣಗಳ ಬಗ್ಗೆ ದೃಢಪಡಿಸಿಕೊಳ್ಳುವುದಾದರೆ ಮುಕ್ತ ಅವಕಾಶವಿದೆ.
ಹೀಗಾಗಿ ಸಂಘದ ಅಭಿವೃದ್ಧಿ ಸಹಿಸದೆ ಅಪಪ್ರಚಾರಗಳನ್ನು ನಡೆಸುವ ಕಿಡಿಗೇಡಿಗಳ ಮಾತಿಗೆ ಗ್ರಾಹಕರು ಕಿವಿಗೊಡಬಾರದು. ನಮ್ಮ ಸಂಸ್ಥೆ ಸುರಕ್ಷಿತವಾಗಿದ್ದು ನಿಮ್ಮ ಆರ್ಥಿಕ ಸುರಕ್ಷೆಗೂ ಸದಾ ಬದ್ದರಿದ್ದೇವೆ ಎಂದು ಈ ಮೂಲಕ ಸ್ಪಷ್ಟಿಕರಣ ನೀಡುತ್ತಿದ್ದೇವೆ ಎಂದು ಶಿರಿಯಾರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ
ಪ್ರದೀಪ್ ಬಲ್ಲಾಳ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ