ಡೈಲಿ ವಾರ್ತೆ: 24/NOV/2025

ಮಂಗಳೂರು| ನಾಲ್ವರಿದ್ದ ತಂಡದಿಂದ ಯುವಕನಿಗೆ ಚೂರಿ ಇರಿತ – ಒಬ್ಬನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು

ಮಂಗಳೂರು: ಒಂದೇ ಬೈಕಿನಲ್ಲಿ ನಾಲ್ವರು ಯುವಕರು ತಲ್ವಾರು ಹಿಡಿದು ತೆರಳುತ್ತಿದ್ದಾಗ ಇನ್ನೊಂದು ಬೈಕಿನಲ್ಲಿದ್ದ ಯುವಕನೊಬ್ಬ ನೋಡಿ ವಿಡಿಯೋ ಮಾಡಲೆತ್ನಿಸಿದ್ದು ಇದನ್ನು ಪ್ರಶ್ನಿಸಿ ನಾಲ್ವರಿದ್ದ ತಂಡ ಚೂರಿಯಿಂದ ಹಲ್ಲೆ ನಡೆಸಿದ ಘಟನೆ ಎಡಪದವು ಬಳಿ ನಡೆದಿದೆ.

ಎಡಪದವು ಬಳಿಯಲ್ಲಿ ಸೋಮವಾರ ಸಂಜೆ ನಾಲ್ಕು ಗಂಟೆ ಸುಮಾರಿಗೆ ಘಟನೆ ನಡೆದಿದ್ದು ಸ್ಥಳೀಯರು ಬಳಿಕ ಅಡ್ಡಹಾಕಿ ಒಬ್ಬನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ನಾಲ್ವರಿದ್ದ ಯುವಕರ ತಂಡವು ಮಿಜಾರು ನಿವಾಸಿ ಅಖಿಲೇಶ್ (27) ಎಂಬ ಯುವಕನಿಗೆ ಚೂರಿಯಿಂದ ಹಲ್ಲೆ ನಡೆಸಿದೆ. ಯುವಕನ ಕೈಗೆ ಚೂರಿಯಿಂದ ಇರಿತದ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ನಾಲ್ವರು ಒಂದೇ ಬೈಕಿನಲ್ಲಿ ಚೂರಿ ಹಿಡಿದುಕೊಂಡು ತೆರಳುತ್ತಿದ್ದರು. ಈ ವೇಳೆ, ಅಖಿಲೇಶ್ ಇದನ್ನು ಗಮನಿಸಿ ವಿಡಿಯೋ ಮಾಡಲೆತ್ನಿಸಿದ್ದಾನೆ ಎನ್ನಲಾಗಿದೆ. ಅಲ್ಲದೇ, ಬೇರೆಯವರಿಗೆ ಕರೆ ಮಾಡಿ ವಿಷಯ ಹೇಳುತ್ತಿದ್ದಾನೆಂದು ತಿಳಿದು ನಾಲ್ವರು ಅಡ್ಡಹಾಕಿ ಹಲ್ಲೆ ನಡೆಸಿದ್ದಾರೆ. ನಾಲ್ವರು ಯುವಕರು ಮಂಗಳೂರಿನ ಬೆಂಗ್ರೆ ಮತ್ತು ಸುರತ್ಕಲ್ ಪರಿಸರದವರು ಎನ್ನಲಾಗುತ್ತಿದ್ದು ಒಂದೇ ಕೋಮಿನವರಾಗಿದ್ದಾರೆ. ಇದಕ್ಕೂ ಮುನ್ನ ಇವರು ಬಾರ್ ಒಂದರಿಂದ ಹೊರಗೆ ಬರುವುದನ್ನು ಕೆಲವರು ನೋಡಿದ್ದಾರೆ. ಹೀಗಾಗಿ ಮದ್ಯದ ಅಮಲಿನಲ್ಲಿ ದಾಳಿ ಕೃತ್ಯ ಮಾಡಿರುವ ಬಗ್ಗೆಯೂ ಪೊಲೀಸರು ಶಂಕಿಸಿದ್ದಾರೆ.

ಆ ಬಳಿಕ ನಾಲ್ವರಿಗೆ ಎಡಪದವು ಬಳಿ ಮರು ದಾಳಿಗೆ ಯತ್ನ ನಡೆದಿದ್ದು ಈ ವೇಳೆ ಮೂವರು ಯುವಕರು ಬೈಕ್ ಬಿಟ್ಟು ಓಡಿ ತಪ್ಪಿಸಿಕೊಂಡಿದ್ದಾರೆ. ಒಬ್ಬಾತನನ್ನು ಸ್ಥಳೀಯರು ಹಿಡಿದು ಬಟ್ಟೆ ಪೊಲೀಸರಿಗೆ ಒಪ್ಪಿಸಿದ್ದಾರೆ. ನಾಲ್ವರ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದ್ದು ಯಾವ ಉದ್ದೇಶದಿಂದ ಕೃತ್ಯ ನಡೆಸಿದ್ದಾರೆಂದು ತನಿಖೆ ನಡೆಸುತ್ತಿದ್ದಾರೆ.