ಡೈಲಿ ವಾರ್ತೆ: 25/NOV/2025

ಆಭರಣ ವ್ಯಾಪಾರಿಯ ಬೆಳ್ಳಿಗಟ್ಟಿ ಕಳವು ಪ್ರಕರಣ – ಎಳನೀರು ವ್ಯಾಪಾರಿಯ ಬಂಧನ

ಬೆಂಗಳೂರು: ಆಭರಣ ವ್ಯಾಪಾರಿಯ ಬ್ಯಾಗ್‌ನಲ್ಲಿದ್ದ
ಲಕ್ಷಾಂತರ ರೂಪಾಯಿ ಮೌಲ್ಯದ ಬೆಳ್ಳಿ ಗಟ್ಟಿಯನ್ನು ಕಳವು ಮಾಡಿದ್ದ ಆರೋಪಿಯನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕಾಟನ್‌ಪೇಟೆಯ ಸೈಯದ್ ಅಯಾಜ್ ಅಲಿಯಾಸ್ ಅಯಾಜ್ ಚೌಧರಿ (45) ಎಂಬಾತನನ್ನು ಬಂಧಿಸಿ, ₹37 ಲಕ್ಷ ಮೌಲ್ಯದ 23 ಕೆ.ಜಿ. 260 ಗ್ರಾಂ ಬೆಳ್ಳಿಯ 49 ಗಟ್ಟಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಸುಮಾರು 50 ಪ್ರಕರಣಗಳಲ್ಲಿ ಆರೋಪಿ ಭಾಗಿಯಾಗಿದ್ದು, ತನಿಖೆ ಮುಂದವರಿದಿದೆ ಎಂದು ಪೊಲೀಸರು ತಿಳಿಸಿದರು.

ಎಂಡಿಪಿ ಮಾರ್ಕೆಟ್ ಮೊದಲ ಹಂತದ ಬೆಟ್ಟಪ್ಪ ಲೈನ್‌ನಲ್ಲಿ ಅಂಬಿಕಾ ಸೇಲ್ಸ್ ಚಿನ್ನದ ಅಂಗಡಿ ಇಟ್ಟುಕೊಂಡಿರುವ ಅಮ‌ರ್ ನಾಗನಾಥ್‌ ಕಾಟೆ ಎಂಬುವರು ತಮ್ಮ ಮಗನಿಗೆ 23 ಕೆ.ಜಿ. ಬೆಳ್ಳಿಯ ಗಟ್ಟಿಯನ್ನು ಸೇಲ್ಸ್ ಕಾರ್ಪನ್ ರಿಫೈನರಿ ವಿನಿಟ್ ಅಂಗಡಿಗೆ ತಲುಪಿಸುವಂತೆ ಹೇಳಿದ್ದರು. ಬೆಳ್ಳಿ ಗಟ್ಟಿ ತೆಗೆದುಕೊಂಡು ಅಂಗಡಿ ಬಳಿ ಬಂದು, ದ್ವಿಚಕ್ರ ವಾಹನ ನಿಲ್ಲಿಸಿ, ಬ್ಯಾಗ್‌ ಅನ್ನು ಫುಟ್‌ಬೋರ್ಡ್‌ನಲ್ಲಿಟ್ಟು, ಹೆಲ್ಮಟ್ ತೆಗೆದಿಡುವ ವೇಳೆ ಗಟ್ಟಿಯಿದ್ದ ಬ್ಯಾಗ್‌ ಕಳವಾಗಿತ್ತು.

ಅಮ‌ರ್ ಅವರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು, ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡು, 24 ಗಂಟೆಯಲ್ಲಿ ಆರೋಪಿಯನ್ನು ಬಂಧಿಸಿ, ಬೆಳ್ಳಿಗಟ್ಟಿಗಳನ್ನು ವಶಕ್ಕೆ ಪಡೆದಿದ್ದಾರೆ.

ಎಳನೀರು ವ್ಯಾಪಾರ: ನಗರದಲ್ಲಿ ಎಳನೀರು, ತೆಂಗಿನಕಾಯಿ ವ್ಯಾಪಾರ ಮಾಡಿಕೊಂಡಿದ್ದ ಆರೋಪಿಯ ವಿರುದ್ಧ ವಿಲ್ಸನ್‌ಗಾರ್ಡನ್, ಚಿಕ್ಕಪೇಟೆ, ಕಾಟನ್‌ಪೇಟೆ, ಪುಲಿಕೇಶಿನಗರ, ಕಲಾಸಿಪಾಳ್ಯ, ಉಪ್ಪಾರ ಪೇಟೆ ಸೇರಿ ನಗರದ ವಿವಿಧ ಪೊಲೀಸ್‌ ಠಾಣೆಗಳಲ್ಲಿ 2000 ರಿಂದ 2025ರ ಅವಧಿಯಲ್ಲಿ 50ಕ್ಕೂ ಹೆಚ್ಚು ಕಳ್ಳತನ, ದರೋಡೆ ಪ್ರಕರಣಗಳು ದಾಖಲಾಗಿವೆ. ಹಲವು ಪ್ರಕರಣಗಳಲ್ಲಿ ಜೈಲು ಸೇರಿದ್ದ. ಜಾಮೀನಿನ ಮೇಲೆ ಹೊರಗೆ ಬಂದು, ತೆಂಗಿನ ಕಾಯಿ ವ್ಯಾಪಾರದ ಜತೆ ಕಳ್ಳತನ ಮಾಡಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.