ಡೈಲಿ ವಾರ್ತೆ: 25/NOV/2025

ಖಾಸಗಿ ಬಂದರು ನಿರ್ಮಾಣ ವಿರೋಧಿಸಿ ಅಂಕೋಲಾ ಸಂಪೂರ್ಣ ಬಂದ್ – ಸಚಿವ, ಶಾಸಕರ ವಿರುದ್ಧ ಆಕ್ರೋಶ: ಪ್ರತಿಭಟನೆಗೆ ಹರಿದು ಬಂದ ಜನಸಾಗರ

ವರದಿ : ವಿದ್ಯಾಧರ ಮೊರಬಾ

ಅಂಕೋಲಾ : ಕೇಣಿಯಲ್ಲಿ ನಿರ್ಮಿ ಸಲು ಉದ್ದೇಶಿಸಿರುವ ಖಾಸಗಿ ಬಂದರು ವಿರೋಧಿಸಿ ನಡೆಯುತ್ತಿರುವ ಹೋರಾಟಕ್ಕೆ ಮಂಗಳವಾರ ಒಂದು ವರ್ಷವಾದ ಹಿನ್ನಲೆಯಲ್ಲಿ ಅಂಕೋಲಾ ಬಂದ್‌ಗೆ ಕರೆ ನೀಡಿ ಬೃಹತ್ ಪ್ರತಿಭಟನೆ ಸಭೆ ಹಮ್ಮಿಕೊಂಡಿದ್ದರು.

ಈ ಪ್ರತಿಭಟನೆಯಲ್ಲಿ 4೦೦೦ಕ್ಕೂ ಅಧಿಕ ಜನರು ಪಾಲ್ಗೊಂಡರೆ, ಇನ್ನೂ ಬಂದ್ ಸಂಪೂರ್ಣ ಯಶಸ್ವಿಯಾಯಿತು.

ಸಂಘಟಕ ಸಂಜೀವ ಬಲೇಗಾರ ಮಾತನಾಡಿ ಕಳೆದ ಒಂದು ವರ್ಷಗಳಿಂದ ವಿವಿಧ ಹಂತದ ಪ್ರತಿಭಟನೆ ಮಾಡುತ್ತಾ ಬಂದಿದ್ದು ತಹಸೀಲ್ದಾರ ಕಚೇರಿ ಎದುರು ಕಳೆದ 14 ದಿನಗಳಿಂದ ಧರಣಿ ಹಮ್ಮಿಕೊಂಡಿದ್ದೇವು. ಆದರೆ ಯಾವ ಜನ ಪ್ರತಿನಿಧಿಗಳು ನಮಗೆ ಬಂದು ಬೆಂಬಲ ಸೂಚಿಸಲಿಲ್ಲ. ಇಂದು ಇಷ್ಟೊಂದು ಪ್ರಮಾಣದಲ್ಲಿ ಜನರು ಬಂದು ಪ್ರತಿಭಟನೆಯಲ್ಲಿ ಭಾಗವಹಿಸುತ್ತಾರೆ ಎಂದರೆ ನಮ್ಮ ಹೋರಾಟದ ಕಿಚ್ಚನ್ನು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಅರ್ಥಮಾಡಿಕೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಶಿವರಾಂ ಗಾಂವ್ಕರ ಮಾತನಾಡಿ, ಈಗಾಗಲೇ ಸಾಕಷ್ಟು ಯೋಜನೆಗಳು ಉತ್ತರ ಕನ್ನಡದ ಬಹು ಭಾಗವನ್ನು ಆವರಿಸಿ ಕೊಂಡಿದೆ. ಈಗ ಮತ್ತೆ ಖಾಸಗಿ ಬಂದರು ನಿರ್ಮಾಣಕ್ಕೆ ಮುಂದಾಗಿದ್ದು ಇದನ್ನು ಯಾವುದೇ ಕಾರಣಕ್ಕೂ ಆಗಲು ಬಿಡುವುದಿಲ್ಲ. ಜನಪ್ರತಿನಿಧಿಗಳು ಚುನಾವಣೆ ಬಂದಾಗ ಮಾತ್ರ ಮನೆಮನೆಗೆ ಬರುತ್ತಾರೆ ಆದರೆ ಗೆದ್ದ ನಂತರ ನಾಪತ್ತೆಯಾಗುತ್ತಾರೆ ಅಂತವರಿಗೆ ತಕ್ಕ ಪಾಠ ಕಲಿಸಬೇಕು ಎಂದರು.

ಉ.ಕ. ಜಿಲ್ಲಾ ಹಾಲಕ್ಕಿ ಒಕ್ಕಲಿಗರ ಸಂಘದ ಅಧ್ಯಕ್ಷ ಹನುಂತ ಬೊಮ್ಮು ಗೌಡ ಮಾತನಾಡಿ, ನಮ್ಮ ಸಮುದಾ ಯದ ಸಾಕಷ್ಟು ಫಲವತ್ತಾದ ಭೂಮಿ ಗಳು ಈ ಯೋಜನೆಗೆ ಭೂಸ್ವಾಧೀನ ವಾಗಲಿದೆ. ಹೀಗಾಗಿ ಯಾವುದೇ ಕಾರಣಕ್ಕೂ ನಾವು ನಮ್ಮ ಭೂಮಿ ಯನ್ನು ಬಿಟ್ಟುಕೊಡುವುದಿಲ್ಲ. ಲಾಭ ನಷ್ಟದ ವಿಚಾರ ಮಾಡದೇ ನಮ್ಮ ಸಮುದಾಯದವರು ಕೃಷಿ ಕಾರ್ಯ ಮಾಡುತ್ತಾರೆ. ಮುಂಗಾರಿನಲ್ಲಿ ಭತ್ತ ಬೆಳೆದರೆ, ಹಿಂಗಾರಿನಲ್ಲಿ ಶೇಂಗಾ, ಕಲ್ಲಂಗಡಿ, ತರಕಾರಿಗಳನ್ನು ಬೆಳೆಯುತ್ತಾರೆ. ಈ ಮೂಲಕವಾಗಿ ಅವರು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ ಎಂದರು.

ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಅರುಣ ನಾಡಕರ್ಣಿ ಮಾತನಾಡಿ, ಈ ಯೋಜನೆ ಗಮನಿಸಿದರೆ ೧೪ ಕಿ.ಮೀ. ಯಷ್ಟು ಸಮುದ್ರದಲ್ಲಿ ಮಣ್ಣು ಹಾಗೂ ಕಲ್ಲುಗಳನ್ನು ಹಾಕಿ ಮುಚ್ಚಬೇಕಾಗುತ್ತದೆ. ಅದೆಲ್ಲಾ ಎಲ್ಲಿಂದ ತರುತ್ತೀರಿ. ಒಂದು ವೇಳೆ ಈ ಯೋಜನೆ ಜಾರಿಗೊಂಡರೆ ಇಡೀ ಕರಾವಳಿ ಸೇರಿದಂತೆ ಅಂಕೋಲಾ ತಾಲೂಕು ಇನ್ನಿಲ್ಲವಾಗುತ್ತದೆ. ಹಾಗೇ ನೋಡಿದರೆ ಬೇಲೇಕೇರಿ ಬಂದರು 140 ಎಕರೆ ವಿಸ್ತಿರ್ಣ ಹೊಂದಿದ್ದು ಖಾಸಗಿ ಕಂಪನಿಯವರ ಪಾಲಾಗಿದೆ. ಹಾಗೇ ಬಂದರಿನ ವಹಿವಾಟು ಮಾಡಬೇಕಾದರೆ ಇದನ್ನು ತೆಗೆದುಕೊಳ್ಳಬಹುದಿತ್ತು. ಅದನ್ನು ಬಿಟ್ಟು ಕೇಣಿಗೆ ಕಣ್ಣು ಹಾಕಿರುವುದು ಸರಿಯಲ್ಲ ಎಂದರು.

ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ:
ಬೃಹತ್ ಪ್ರಮಾಣದ ಮೆರವಣಿಗೆ ಹಾಗೂ ಪ್ರತಿಭಟನಾ ಸಭೆಯ ತೀವ್ರತೆ ಹೆಚ್ಚುತ್ತಿದ್ದಂತೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರೀಯಾ ಅವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದರು. ಹೋರಾ ಟಗಾರರು ತಮ್ಮ ಸಮಸ್ಯೆಗಳನ್ನು ಅವಲತ್ತುಕೊಂಡರು. ಮನವಿಯನ್ನು ಸ್ವೀಕರಿಸ ಇದನ್ನು ಸರಕಾರಕ್ಕೆ ಕಳಿಸುವುದಾಗಿ ಹೇಳಿದರು.

ಶಿವಮೊಗ್ಗ ರೈತ ಸಂಘದ ಅಧ್ಯಕ್ಷ ದಿನೇಶ, ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಭಾಸ್ಕರ ಪಟಗಾರ, ಸಂದೀಪ ಬಂಟ, ರಾಜು ಹರಿಕಂತ್ರ, ದಾಮೋದರ ಜಿ. ನಾಯ್ಕ, ಉದಯ ವಾಮನ ನಾಯ್ಕ, ಪ್ರಮೋದ ಬಾನಾ ವಳಿಕರ, ರಾಜೇಶ್ವರಿ ಕೇಣಿಕರ, ಸರಿತಾ ಬಲೇಗಾರ, ಯಮುನಾ ಹರಿಕಂತ್ರ, ಮಾದೇವ ಗೌಡ, ರಮೇಶ ನಾಯ್ಕ, ಹೂವಾ ಖಂಡೇಕರ, ಶೇಖರ್ ಹರಿಕಂತ್ರ, ಸೇರಿದಂತೆ ಸುಮಾರು 4೦೦೦ ಕ್ಕೂ ಅಧಿಕ ಜನರು ಪಾಲ್ಗೊಂಡಿದ್ದರು.

ಪ್ರತಿಭಟನಾಕಾರರು ಅಣುಕು ಶವ ದೊಂದಿಗೆ ಮೆರವಣಿಗೆಯನ್ನು ನಡೆಸಿ ನಂತರ ಕ್ರೀಯಾಕರ್ಮಗಳನ್ನು ಮಾಡುವ ಮೂಲಕ ತಮ್ಮ ಆಕ್ರೊಶ ವ್ಯಕ್ತಪಡಿಸಿದರು. ಮೀನುಗಾರ ಸಮಾಜದ ಹೆಸರಿನಲ್ಲಿ ಮಂತ್ರಿ ಸ್ಥಾನ ಪಡೆದ ಮಂಕಾಳ ವೈದ್ಯ ಇದುವರೆಗೂ ನಮ್ಮ ಸಮಸ್ಯೆಯನ್ನು ಕೇಳಿಲ್ಲ. ಬದಲಾಗಿ ಈ ಯೋಜ ನೆಯ ಬಗ್ಗೆ ಮುಖ್ಯಮಂತ್ರಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಗುತ್ತಿಗೆ ಕಂಪ ನಿಯವರು ಯರ‍್ಯಾರ ಖಾತೆಗೆ ಜಮಾ ಮಾಡಿದ್ದರೋ ಗೊತ್ತಿಲ್ಲ. ಸಚಿವರಿಗೆ ಹಣದ ಅವಶ್ಯಕತೆ ಇದ್ದರೆ ಹಣ ಸೇರಿಸಿ ಹಾಗೂ ಇತರರಿಂದ ಭಿಕ್ಷೆ ಬೇಡಿ ನೀಡುತ್ತೇವೆ. ಆದರೆ ಒಮ್ಮೆಯಾದರೂ ನಮ್ಮ ಪ್ರತಿಭಟನೆಗೆ ಪಾಲ್ಗೊಳ್ಳಿ ಎಂಬ ಮಾತುಗಳು ಸಭೆಯಲ್ಲಿ ಕೇಳಿಬಂದವು.