ಡೈಲಿ ವಾರ್ತೆ: 01/DEC/2025

ಮಣಿಪಾಲ| ಬೆಂಕಿಗಾಹುತಿಯಾದ ಶಾಲಾ ಬಸ್ – ತಪ್ಪಿದ ಭಾರೀ ದುರಂತ

ಉಡುಪಿ: ಒಣ ಹುಲ್ಲಿಗೆ ಇಟ್ಟ ಬೆಂಕಿಗೆ ಶಾಲಾ ಬಸ್‌ ವೊಂದು ಸುಟ್ಟು ಹೋದ ಘಟನೆ ಮಣಿಪಾಲ ಅಲೆವೂರು ಪ್ರಗತಿ ನಗರದ ಕೇಂದ್ರೀಯ ವಿದ್ಯಾಲಯ ಪರಿಸರದಲ್ಲಿ ಸೋಮವಾರ ಸಂಜೆ ಸಂಭವಿಸಿದೆ.

ಅಲೆವೂರು ಪ್ರಗತಿ ನಗರ ಪರಿಸರದಲ್ಲಿ ಒಣ ಹುಲ್ಲಿಗೆ ತಗಲಿದ ಬೆಂಕಿ ಪರಿಸರವಿಡಿ ವ್ಯಾಪಿಸಿದೆ. ಅಲ್ಲೇ ಸಮೀಪ ನಿಲ್ಲಿಸಿದ್ದ ಖಾಸಗಿ ಶಾಲಾ ಬಸ್ ಬೆಂಕಿಗಾಹುತಿಯಾಗಿದೆ. ಇದನ್ನು ಗಮನಿಸಿದ ಸ್ಥಳೀಯರು ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.
ಅಷ್ಟೊತ್ತಿಗೆ ಬಸ್ ಸುಟ್ಟು ಕರಕಲಾಗಿತ್ತು. ಮಕ್ಕಳನ್ನು ಮನೆಗೆ ಕರೆದೊಯ್ದ ನಂತರ ಬಸ್ಸನ್ನು ನಿಲ್ಲಿಸಿರುವುದರಿಂದ ಬಸ್ಸಿನಲ್ಲಿ ಯಾರೂ ಇರಲಿಲ್ಲ. ಇದರಿಂದ ಭಾರೀ ದುರಂತವೊಂದು ತಪ್ಪಿದಂತಾಗಿದೆ.