
ಡೈಲಿ ವಾರ್ತೆ: 02/DEC/2025
ಕಾಂತಾರ ದೈವಕ್ಕೆ ಅವಮಾನ: ನಟ ರಣ್‌ವೀರ್ ವಿರುದ್ಧ #Boycott ‘ಧುರಂದರ್’ ಅಭಿಯಾನ

ಬೆಂಗಳೂರು: ಪಣಜಿಯಲ್ಲಿ ಶುಕ್ರವಾರ ಆ.28 ನಡೆದ
56ನೇ ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ (IFFI-ಇಫಿ) ಸಮಾರೋಪ ಸಮಾರಂಭದಲ್ಲಿ ‘ಕಾಂತಾರ’ ಪ್ರೀಕ್ವೆಲ್‌ನಲ್ಲಿ ಬರುವ ಚಾವುಂಡಿ ದೈವವನ್ನು ‘ದೆವ್ವ'(ಘೋಸ್ಟ್) ಎಂದು ಬಾಲಿವುಡ್ ನಟ ರಣ್‌ವೀರ್ ಸಿಂಗ್ ಹೇಳಿರುವುದು ವಿವಾದ ಸೃಷ್ಟಿಸಿದ್ದು, ತುಳುನಾಡಿನ ಜನರ ಆಕ್ರೋಶಕ್ಕೂ ಕಾರಣವಾಗಿದೆ.
ತುಳುನಾಡಿದ ಜನರಿಗೆ, ಸಂಪ್ರದಾಯಕ್ಕೆ ರಣ್‌ವೀರ್ ಸಿಂಗ್ ಅಗೌರವ ತೋರಿಸಿದ್ದು, ತುಳುನಾಡಿನ ಜನರನ್ನು ಕ್ಷಮೆ ಕೇಳಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.
ಈ ನಡುವೆ ರಣ್‌ವೀರ್ ನಟನೆಯ ಮುಂಬರುವ ಧುರಂದರ್ ಸಿನಿಮಾವನ್ನು ಬಹಿಷ್ಕರಿಸಬೇಕು ಎನ್ನುವ ಕೂಗು ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿದೆ.
ಧುರಂದರ್ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಹೋಗಬೇಕೆಂದಿದ್ದೆ. ಆದರೆ ಈಗ ಸಿನಿಮಾವನ್ನು ಬಹಿಷ್ಕರಿಸುತ್ತೇನೆ. ರಿಷಬ್ ಶೆಟ್ಟಿಯವರು ಈ ಬಗ್ಗೆ ನಿಲುವು ತೆಗೆದುಕೊಳ್ಳಬೇಕು’ ಎಂದು ‘ಎಕ್ಸ್’ ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.
‘ತುಳುನಾಡಿನ ಜನರಿಗೆ ಚಾವುಂಡಿ ದೈವವಾಗಿದೆ. ಯಾವುದೋ ಹಾಲೊವಿನ್ ದೆವ್ವವಲ್ಲ. ರಣ್‌ವೀರ್ ನೀವು ಪವಿತ್ರ ನಂಬಿಕೆಗಳನ್ನು ಅಪಹಾಸ್ಯ ಮಾಡಿ ನಕ್ಕಿದ್ದೀರಿ. ಇದು ಮನರಂಜನೆ ಅಲ್ಲ, ಸಂಸ್ಕೃತಿಯೊಂದರ ಬಗ್ಗೆ ತೋರಿದ ಕಡೆಗಣನೆ. ಅಜ್ಞಾನ ಮತ್ತು ದುರಹಂಕಾರದ ನಡೆಯಾಗಿದೆ. ಕಾಂತಾರ ಅಧ್ಯಾಯ 1 ಗೌರವಕ್ಕೆ ಅರ್ಹವಾಗಿದೆ, ನಿಮ್ಮ ಅಗ್ಗದ ಅಪಹಾಸ್ಯಕ್ಕಲ್ಲ’ ಎಂದು ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ #BoycottDhur andhar, #BoycottRanveerSingh 2 ಹ್ಯಾಷ್‌ಟ್ಯಾಗ್‌ಗಳು ಟ್ರೆಂಡ್ ಸೃಷ್ಟಿಸಿವೆ.
ಧುರಂದರ್ ಸಿನಿಮಾದಲ್ಲಿ ರಣ್‌ವೀರ್ ಸಿಂಗ್, ಸಂಜಯ್ ದತ್, ಅಕ್ಷಯ ಖನ್ನಾ, ಆರ್. ಮಾಧವನ್, ಅರ್ಜುನ್ ರಾಂಪಾಲ್, ಸಾರಾ ಅರ್ಜುನ್ ಸೇರಿ ಹಲವರು ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಡಿ.5ರಂದು ತೆರೆ ಕಾಣಲು ಸಜ್ಜಾಗಿದೆ.