
ಡೈಲಿ ವಾರ್ತೆ: 02/DEC/2025
ಉಡುಪಿ| ಮನೆಕಳ್ಳತನ ಪ್ರಕರಣದ ಆರೋಪಿಯ ಬಂಧನ – ಲಕ್ಷಾಂತರ ರೂ.ಮೌಲ್ಯದ ಚಿನ್ನಾಭರಣ ವಶ

ಉಡುಪಿ: ಉಡುಪಿ ನಗರದಲ್ಲಿ ನಡೆದ ಮನೆಕಳ್ಳತನ ಪ್ರಕರಣವನ್ನು ಬಿಗಿಗೈ ಹಿಡಿದಿರುವ ಪೊಲೀಸ್ ಸಿಬ್ಬಂದಿ, ಆರೋಪಿಯನ್ನು ಬಂಧಿಸಿ ಸುಮಾರು 548.31 ಗ್ರಾಮ್ ಚಿನ್ನಾಭರಣ ಮತ್ತು ಮೊಬೈಲ್ ಫೋನ್ ಸೇರಿ 65,79,720ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ನವೆಂಬರ್ 30ರಂದು ಬೆಳಿಗ್ಗೆ 8.30ಕ್ಕೆ ಚರ್ಚಿಗೆ ಹೋಗಲು ಸಿದ್ಧರಾಗಿದ್ದ ಒಳಕಾಡು ನಿವಾಸಿ ಶೈಲಾ ವಿಲ್ಹೆಲ್ ಮೀನಾ ಅವರ ಮನೆಯಲ್ಲಿ ಈ ಕಳ್ಳತನ ನಡೆದಿತ್ತು. ಮನೆಯ ಬೆಡ್‌ರೂಮ್‌ನ ಕಪಾಟಿನ ಸ್ಲೈಡ್ ಡೋರ್ ಮುರಿದು ಒಳ ಪ್ರವೇಶಿಸಿದ ಕಳ್ಳರು ಚಿನ್ನಾಭರಣ ಮತ್ತು ಮೊಬೈಲ್ ಕಳವು ಮಾಡಿಕೊಂಡಿದ್ದರು. ಈ ಕುರಿತು ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಸುಳಿವುಗಳನ್ನು ಹಿಂಬಾಲಿಸಿದ ವಿಶೇಷ ತಂಡವು, ಡಿವೈಎಸ್‌ಪಿ ಡಿಟಿ ಪ್ರಭು ಅವರ ಮಾರ್ಗದರ್ಶನದಲ್ಲಿ, ಪೊಲೀಸ್ ನಿರೀಕ್ಷಕ (ಪ್ರಭಾರ) ಮಹೇಶ್ ಪ್ರಸಾದ್ ಹಾಗೂ ಉಪನಿರೀಕ್ಷಕ ಭರತೇಶ ಕಂಕಣವಾಡಿ ನೇತೃತ್ವದಲ್ಲಿ ಡಿಸೆಂಬರ್ 2ರಂದು ಸುಕೇಶ ನಾಯ್ಕ (37) ಎಂಬಾತನನ್ನು ಉಡುಪಿ ಕಿನಿಮೂಲ್ಕಿ ಹಿರೇನ್ ಬಾರ್ ಬಳಿ ಬಂಧಿಸಿದೆ.
ಆರೋಪಿ ನೀಡಿದ ಮಾಹಿತಿಯ ಆಧಾರದಲ್ಲಿ ಅಜ್ಜರಕಾಡು ಪ್ರದೇಶದ ಮನೆಯಲ್ಲಿ ಮರೆಮಾಡಿದ್ದ ಕಳವಾದ ಚಿನ್ನಾಭರಣವನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಬಂಧಿತ ಸುಕೇಶ ನಾಯ್ಕ ವಿರುದ್ದ ಉಡುಪಿ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಒಟ್ಟು 11 ಮನೆಕಳ್ಳತನ ಪ್ರಕರಣಗಳು ದಾಖಲಾಗಿದ್ದು,
▪️ಉಡುಪಿ ನಗರದಲ್ಲಿ – 5 ಪ್ರಕರಣ (4ಕ್ಕೆ ಶಿಕ್ಷೆ)
▪️ಹಿರಿಯಡ್ಕದಲ್ಲಿ – 3 ಪ್ರಕರಣ (1ಕ್ಕೆ ಶಿಕ್ಷೆ)
▪️ಬ್ರಹ್ಮಾವರದಲ್ಲಿ – 2 ಪ್ರಕರಣ
▪️ಮಣಿಪಾಲಿನಲ್ಲಿ – 1 ಪ್ರಕರಣ ವಿಚಾರಣೆಯಲ್ಲಿದೆ.
ಈ ಕಾರ್ಯಾಚರಣೆಯಲ್ಲಿ ಪ್ರಸನ್ನ ಸಿ., ಜೀವನ್ ಕುಮಾರ್, ಸಂತೋಷ್ ಶೆಟ್ಟಿ, ಬಶೀರ್, ಸುರೇಂದ್ರ ಡಿ., ಆನಂದ ಎಸ್., ಸಂತೋಷ್ ರಾಥೋಡ್ ಹಾಗೂ ಸಂತೋಷ್ ಗುಲ್ವಾಡಿ ಸೇರಿದ್ದ ಪೊಲೀಸ್ ಸಿಬ್ಬಂದಿ ಪಾಲ್ಗೊಂಡಿದ್ದಾರೆ.