
ಡೈಲಿ ವಾರ್ತೆ: 04/DEC/2025
ಪತ್ನಿಯ ಕೊಲೆಗೈದು ಪತಿ ನೇಣಿಗೆ ಶರಣು!

ಬೆಂಗಳೂರು: ಬಟ್ಟೆ ಒಣಗಾಕುವ ದಾರ ಕುತ್ತಿಗೆಗೆ ಸುತ್ತಿ ಪತ್ನಿಯ ಕೊಲೆಗೈದು ಬಳಿಕ ವೃದ್ಧ ತಾನೂ ನೇಣಿಗೆ ಶರಣಾಗಿರುವ ಘಟನೆ ನಗರದ ಸುಬ್ರಹ್ಮಣ್ಯಪುರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಪತ್ನಿ ಬೇಬಿ(60) ಅನ್ನು ಕೊಲೆ ಮಾಡಿ, ಬಳಿಕ ವೆಂಕಟೇಶನ್ (65) ತಾನು ಆತ್ಮಹತ್ಯೆಗೆ ಶರಣಾಗಿದ್ದಾನೆ.
ವೃದ್ಧ ಬಿಎಂಟಿಸಿ ಡ್ರೈವರ್ ಆಗಿ ಕೆಲಸ ನಿರ್ವಹಿಸಿ, ಸದ್ಯ ನಿವೃತ್ತಿ ಹೊಂದಿದ್ದರು. ಇನ್ನೂ ಪತ್ನಿ ಸ್ಟ್ರೋಕ್ ಆಗಿ, ಹಾಸಿಗೆ ಹಿಡಿದಿದ್ದರು ಎಂದು ತಿಳಿದುಬಂದಿದೆ.
ಇಬ್ಬರ ನಡುವೆ ಆಗಾಗ ಸಣ್ಣಪುಟ್ಟ ವಿಚಾರಗಳಿಗೆ ಜಗಳ ಆಗುತ್ತಿತ್ತು. ದಂಪತಿಗೆ ಇಬ್ಬರು ಮಕ್ಕಳಿದ್ದರು. ಅವರು ಹೊರಗಡೆ ಹೋದಾಗ ಜಗಳ ಮಾಡಿಕೊಳ್ಳುತ್ತಿದ್ದರು. ಇದೇ ರೀತಿ ಡಿ.2ರಂದು ಇಬ್ಬರು ಜಗಳವಾಡಿದ್ದರು. ಈ ವೇಳೆ ಜಗಳ ವಿಕೋಪಕ್ಕೆ ತಿರುಗಿ, ವೃದ್ಧ ಪತಿ ಬಟ್ಟೆ ಒಣಗಾಕುವ ದಾರದಲ್ಲಿ ಪತ್ನಿಯ ಕತ್ತು ಸುತ್ತಿ ಕೊಲೆಗೈದಿದ್ದಾನೆ. ಬಳಿಕ ಅದೇ ಹಗ್ಗದಲ್ಲಿ ತಾನು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಘಟನಾ ಸ್ಥಳಕ್ಕೆ ಸುಬ್ರಹ್ಮಣ್ಯಪುರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಾನೂನು ಪ್ರಕ್ರಿಯೆ ಮುಂದುವರೆಸಿದ್ದಾರೆ.