ಡೈಲಿ ವಾರ್ತೆ: 14/DEC/2025

ಪೊಲೀಸ್‌ ಅಂತ ಬಿಲ್ಡಪ್‌: ಬೆದರಿಕೆ ಹಾಕಿ ಹಣ ವಸೂಲಿ ಮಾಡ್ತಿದ್ದ ನಕಲಿ PSI ಸೇರಿ ನಾಲ್ವರ ಬಂಧನ

ಬೆಂಗಳೂರು: ಯೂನಿಫಾರಂ ಹಾಕ್ಕೊಂಡು ರಿಯಲ್‌ ಪೊಲೀಸ್‌ ಅಂತ ಬಿಲ್ಡಪ್‌ ಕೊಟ್ಟು, ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದ ನಕಲಿ ಪಿಎಸ್‌ಐ ಸೇರಿ ನಾಲ್ವರನ್ನು ಬಂಧಿಸಲಾಗಿದೆ.

ಮಲ್ಲಿಕಾರ್ಜುನ, ಪ್ರಮೋದ್‌, ವಿನಯ್‌, ಹೃತ್ವಿಕ್‌ ಬಂಧಿತ ಆರೋಪಿಗಳು. ಆರೋಪಿಗಳು ಪ್ಲಾನ್ ಮಾಡಿ ಮನೆಗೆ ನುಗ್ಗಿ ಬೆದರಿಕೆ ಹಾಕಿ ಹಣ ದೋಚುತ್ತಿದ್ದರು. ಹೀಗೆಯೇ ವ್ಯಕ್ತಿಗೆ ಬೆದರಿಸಿ ಡಕಾಯಿತಿ ಮಾಡಿದ್ದ ನಾಲ್ವರನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.

ವಿದ್ಯಾರಣ್ಯಪುರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪಿಎಸ್ಐ ಆಗಬೇಕು ಅಂತ ಮಲ್ಲಿಕಾರ್ಜುನ ಎರಡು ಬಾರಿ ಎಕ್ಸಾಮ್ ಬರೆದಿದ್ದ. ಎರಡು ಬಾರಿಯೂ ಪರೀಕ್ಷೆಯಲ್ಲಿ ಫೇಲ್ ಆಗಿದ್ದ. ಇಷ್ಟಾದ್ರೂ ಪರೀಕ್ಷೆ ಪಾಸ್ ಆಗಿ ಪಿಎಸ್ಐ ಆಗಿದ್ದೇನೆ ಎಂದು ಊರಲ್ಲಿ ಬಿಂಬಿಸಿದ್ದ. ಪೊಲೀಸ್ ಯೂನಿಫಾರಂ, ಲಾಠಿ, ಟೋಪಿ, ಶೂ ಧರಿಸಿ ಫೋಟೋ ಶೂಟ್ ಮಾಡಿಸಿದ್ದ. ಸ್ವಂತ ಊರು ಸಿರಗುಪ್ಪದಲ್ಲಿ ತಾನೂ ಬೆಂಗಳೂರಲ್ಲಿ ಪಿಎಸ್ಐ ಆಗಿದ್ದೀನಿ ಅಂತ ಬಿಲ್ಡಪ್ ಕೊಟ್ಟಿದ್ದ.

ಐಷಾರಾಮಿ ಜೀವನ ನಡೆಸಬೇಕು ಅಂತ ಮಲ್ಲಿಕಾರ್ಜುನ ಅಡ್ಡದಾರಿ ಹಿಡಿದಿದ್ದ. ಇದಕ್ಕೆ ಮಲ್ಲಿಕಾರ್ಜುನನಿಗೆ ಎ4 ಆರೋಪಿ ಹೃತ್ವಿಕ್ ಸಾಥ್‌ ಕೊಟ್ಟಿದ್ದ. ನವೀನ್ ಎಂಬವರನ್ನು ಹೃತ್ವಿಕ್‌ ತುಂಬಾ ಹತ್ತಿರದಿಂದ ಗಮನಿಸಿದ್ದ. ನವೀನ್ ಮನೆಗೆ ನುಗ್ಗಿದ್ರೆ ಹಣ, ಚಿನ್ನಾಭರಣ ಸಿಗುತ್ತೆ ಎಂದು ಮಲ್ಲಿಕಾರ್ಜುನನಿಗೆ ತಿಳಿಸಿದ್ದ. ಅದರಂತೆ ಪೊಲೀಸ್ ಡ್ರೆಸ್ ಧರಿಸಿ ನವೀನ್ ಮನೆಗೆ ಇದೇ ತಿಂಗಳು 7 ರಂದು ಕಾರಿನಲ್ಲಿ ಆರೋಪಿಗಳು ಎಂಟ್ರಿ ಕೊಟ್ಟಿದ್ದರು.

ನೀನು ಗಾಂಜಾ ಮಾರುತ್ತಿದ್ದೀಯಾ, ಮನೆ ಸರ್ಚ್ ಮಾಡಬೇಕು ಅಂತಾ ಬೆದರಿಕೆ ಹಾಕಿದ್ದರು. ನವೀನ್ ಮೇಲೆ ಲಾಠಿ, ಕಬ್ಬಿಣದ ರಾಡ್‌ನಿಂದ ಹಲ್ಲೆ ಮಾಡಿದ್ದರು. ಅರೆಸ್ಟ್ ಮಾಡಬಾರದು ಅಂದರೆ ಹಣ ಕೊಡಬೇಕು ಎಂದು ಖಾತೆಯಲ್ಲಿದ್ದ 87 ಸಾವಿರ, ಬೀರುವನಲ್ಲಿದ್ದ 53 ಸಾವಿರ, ಪರ್ಸ್‌ನಲ್ಲಿದ್ದ 2 ಸಾವಿರ ಕಸಿದು ಪರಾರಿಯಾಗಿದ್ದರು. ಈ ಬಗ್ಗೆ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ನವೀನ್ ಪ್ರಕರಣ ದಾಖಲಿಸಿದ್ದರು.

ಕಾರ್ಯಾಚರಣೆ ನಡೆಸಿ ನಕಲಿ ಪಿಎಸ್ಐ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. 45 ಸಾವಿರ ಹಣ, ಕೃತ್ಯಕ್ಕೆ ಬಳಸಿದ್ದ ಕಾರು ಸೀಜ್ ಮಾಡಿದ್ದಾರೆ. ವಿದ್ಯಾರಣ್ಯಪುರ ಪೊಲೀಸರಿಂದ ತನಿಖೆ ಮುಂದುವರಿದಿದೆ.