
ಡೈಲಿ ವಾರ್ತೆ: 14/DEC/2025
ಭಟ್ಕಳ: ಕುಡಿಯಲು ನೀರು ಕೇಳುವ ನೆಪದಲ್ಲಿ ವೃದ್ಧೆಯ ಚಿನ್ನದ ಸರ ಎಗರಿಸಿ ಪರಾರಿಯಾದ ದುಷ್ಕರ್ಮಿಗಳು

ಭಟ್ಕಳ: ಕುಡಿಯಲು ನೀರು ಕೇಳುವ ನೆಪದಲ್ಲಿ ವೃದ್ಧೆಯೊಬ್ಬರ ಚಿನ್ನದ ಚೈನ್ ಎಗರಿಸಿ ದುಷ್ಕರ್ಮಿಗಳು ಪರಾರಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಬೆಳಕೆಯ ಗರಡಿಹಿತ್ಲಿನಲ್ಲಿ ನಡೆದಿದೆ.
ಗರಡಿಹಿತ್ಲು ನಿವಾಸಿ ಹೊನ್ನಮ್ಮ ಮಹಾದೇವ ನಾಯ್ಕ (70) ಚಿನ್ನದ ಚೈನ್ ಕಳೆದುಕೊಂಡ ವೃದ್ಧೆಯಾಗಿದ್ದಾರೆ.
ಜರ್ಸಿ ಹಾಗೂ ಮಾಸ್ಕ್ ಧರಿಸಿದ್ದ ಇಬ್ಬರು ದುಷ್ಕರ್ಮಿಗಳು ಬೈಕ್‌ನಲ್ಲಿ ಬಂದು, ವಿಳಾಸ ಕೇಳುವ ನೆಪದಲ್ಲಿ ವೃದ್ಧೆಯನ್ನು ಸಂಪರ್ಕಿಸಿದ್ದಾರೆ.
ತಾವು ಕೊರಿಯರ್ ಪರಿಚಯಿಸಿಕೊಂಡು, ಯಾರೋ ವ್ಯಕ್ತಿಯ ಹೆಸರನ್ನು ಹೇಳಿ ಈ ವಿಳಾಸ ಎಲ್ಲಿ ಎಂದು ಅಜ್ಜಿಯ ಬಳಿ ಪ್ರಶ್ನಿಸಿದ್ದಾರೆ.
ಅಂತಹ ವ್ಯಕ್ತಿ ಇಲ್ಲಿ ಯಾರೂ ಇಲ್ಲ ಎಂದು ಅಜ್ಜಿ ತಿಳಿಸಿದ ಬಳಿಕ, ದುಷ್ಕರ್ಮಿಗಳು ಕುಡಿಯಲು ನೀರು ಕೇಳಿದ್ದಾರೆ. ಅಜ್ಜಿ ಒಂದು ಪಾತ್ರೆಯಲ್ಲಿ ನೀರು ತಂದಿದ್ದು, ಅದನ್ನು ಕುಡಿದ ನಂತರ ಮತ್ತೆ ನೀರು ಬೇಕೆಂದು ಕೇಳಿದ್ದಾರೆ. ಅಜ್ಜಿ ಎರಡನೇ ಬಾರಿ ನೀರು ತರುವಷ್ಟರಲ್ಲಿ ಬೈಕ್‌ನ ಹಿಂಬದಿ ಕುಳಿತಿದ್ದ ದುಷ್ಕರ್ಮಿ ವೃದ್ಧೆಯ ಕುತ್ತಿಗೆಯಿಂದ ಚಿನ್ನದ ಚೈನ್ ಎಳೆದಿದ್ದಾನೆ.
ಚೈನ್ ಎಳೆದ ರಭಸಕ್ಕೆ ಅಜ್ಜಿ ನೆಲಕ್ಕೆ ಬಿದ್ದಿದ್ದು, ಅದೇ ವೇಳೆ ಇಬ್ಬರು ದುಷ್ಕರ್ಮಿಗಳು ಬೈಕ್‌ನಲ್ಲಿ ಪರಾರಿಯಾಗಿದ್ದಾರೆ ಅಜ್ಜಿ ಕೂಗಾಡುತ್ತಿದ್ದಂತೆಯೇ ಸ್ಥಳೀಯರು ದುಷ್ಕರ್ಮಿಗಳನ್ನು ಬೆನ್ನಟ್ಟಿದರೂ, ಅವರು ಶಿರೂರು ಟೋಲ್‌ಗೇಟ್ ಮೂಲಕ ಬೈಕ್‌ನಲ್ಲಿ ತಪ್ಪಿಸಿಕೊಂಡಿದ್ದಾರೆ.
ಘಟನೆಯ ಮಾಹಿತಿ ಪಡೆದ ತಕ್ಷಣ ಡಿವೈಎಸ್ಪಿ ಮಹೇಶ್, ಸಿಪಿಐ ಮಂಜುನಾಥ ಲಿಂಗಾರೆಡ್ಡಿ ಸೇರಿದಂತೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿದಿದೆ.