ಡೈಲಿ ವಾರ್ತೆ: 31/DEC/2025

ಸುಳ್ಯ: ರಿಕ್ಷಾ ಚಾಲಕ ಅಬ್ದುಲ್ ಜಬ್ಬಾರ್ ಸಾವು ಪ್ರಕರಣ:
‘ಅಸಹಜ ಸಾವಲ್ಲ, ಕೊಲೆ’ ವೈದ್ಯಕೀಯ ವರದಿಯಲ್ಲಿ ದೃಢ! ಇಬ್ಬರು ಆರೋಪಿಗಳ ಬಂಧನ

ಸುಳ್ಯ: ಸುಳ್ಯ ತಾಲೂಕಿನಲ್ಲಿ ಸಾಕಷ್ಟು ಸುದ್ದಿಗೆ ಕಾರಣವಾಗಿದ್ದ ರಿಕ್ಷಾ ಚಾಲಕ ಅಬ್ದುಲ್ ಜಬ್ಬಾರ್ ಅವರದ್ದು ಅಸಹಜ ಸಾವಲ್ಲ, ಕೊಲೆ ಎಂಬುವುದಾಗಿ ಕೃತ್ಯ ನಡೆದ ಮೂರು ತಿಂಗಳ ನಂತರ ದೃಢವಾಗಿದ್ದು, ವೈದ್ಯಕೀಯ ವರದಿಯಲ್ಲಿ ಹಲ್ಲೆ ನಡೆಸಿದ ಪರಿಣಾಮ ಸಾವು ಸಂಭವಿಸಿದೆ ಎಂದು ದೃಡಪಡಿಸಿದೆ.

ಅಕ್ಟೋಬರ್ 16 ರಂದು ಬಾಡಿಗೆ ನೆಪದಲ್ಲಿ ಮೊಹಮ್ಮದ್ ರಫೀಕ್ ಹಾಗೂ ಇತರರು ದುಗ್ಗಲಡ್ಕಕ್ಕೆ ಕರೆಸಿಕೊಂಡಿದ್ದರು. ಬಾಡಿಗೆಗೆಂದು ಹೊರಟ ಅಬ್ದುಲ್ ಜಬ್ಬಾ‌ರ್ ಅವರನ್ನು ಸುಳ್ಯ ಕಲ್ಲಗುಂಡಿಗೆ ಕರೆತಂದು ಮಾರಣಾಂತಿಕ ಹಲ್ಲೆ ನಡೆಸಿ ಬಿಟ್ಟಿದ್ದರು. ಮರುದಿನ ಹಲ್ಲೆಯಿಂದ ಅನಾರೋಗ್ಯಕ್ಕೀಡಾದ ಅಬ್ದುಲ್ ಜಬ್ಬಾ‌ರ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಜಬ್ಬಾ‌ರ್ ಮೃತಪಟ್ಟಿದ್ದರು.

ಈ ಸಂಬಂಧ ಮೃತರ ಪತ್ನಿ ಸುಮಯ್ಯಾ ತನ್ನ ಗಂಡ ಅಬ್ದುಲ್ ಜಬ್ಬಾ‌ರ್ ಸಾವಿಗೆ ರಫೀಕ್ ಪಡು ಮತ್ತು ಇತರರು ಕಾರಣ ಎಂದು ದೂರು ನೀಡಿದ್ದರು. ಸುಳ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ: 125/2025, ಕಲಂ: 105 ಜೊತೆಗೆ 3(5) BNS ರಂತೆ ಪ್ರಕರಣ ದಾಖಲಾಗಿತ್ತು.

ಆದರೆ ಇದೀಗ ವೈದ್ಯಕೀಯ ವರದಿಯಲ್ಲಿ ಆರೋಪಿಗಳು ನಡೆಸಿದ ಹಲ್ಲೆಯ ಪರಿಣಾಮ ಅಬ್ದುಲ್‌ ಜಬ್ಬಾರ್ ರವರು ಮೃತಪಟ್ಟಿರುವುದಾಗಿ ದೃಢಪಟ್ಟಿರುವುದರಿಂದ ಸದ್ರಿ ಪ್ರಕರಣವನ್ನು ಕಲಂ: 103 ಜೊತೆಗೆ 3(5) BNS ರಂತೆ ಕೊಲೆ ಪ್ರಕರಣವಾಗಿ ಮಾರ್ಪಡಿಸಲಾಗಿರುತ್ತದೆ.

ಪ್ರಕರಣದ ತನಿಖೆ ನಡೆಸಲಾಗಿ, ಆರೋಪಿಯಾದ ಸುಳ್ಯ ಕಸಬ ನಿವಾಸಿ ಮೊಹಮ್ಮದ್ ರಫೀಕ್ (41) ಎಂಬಾತನನ್ನು ದಸ್ತಗಿರಿ ಮಾಡಿ, ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ, ಪ್ರಕರಣದ ಮುಂದಿನ ತನಿಖೆಗಾಗಿ ಪೊಲೀಸ್‌ ಕಸ್ಟಡಿಗೆ ಪಡೆದುಕೊಳ್ಳಲಾಗಿರುತ್ತದೆ. ಕೃತ್ಯಕ್ಕೆ ಬಳಸಿದ ಕಾರನ್ನು ಸ್ವಾಧೀನಪಡಿಸಿಕೊಳ್ಳಲಾಗಿದ್ದು, ಪ್ರಕರಣದ ಇನ್ನೋರ್ವ ಆರೋಪಿಯಾದ ಸುಳ್ಯ ಸಂಪಾಜೆ ನಿವಾಸಿ ಮನೋಹರ್ ಕೆ ಎಸ್ ಯಾನೆ ಮನು (42) ಎಂಬಾತನನ್ನು ದಸ್ತಗಿರಿ ಮಾಡಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.