ಡೈಲಿ ವಾರ್ತೆ:JAN/01/2026

ಬಳ್ಳಾರಿ| ಜನಾರ್ದನ ರೆಡ್ಡಿ ಮನೆ ಮುಂದೆ ಬ್ಯಾನರ್‌ ಗಲಾಟೆ: ಓರ್ವ ಕಾಂಗ್ರೆಸ್ ಕಾರ್ಯಕರ್ತ ಗುಂಡೇಟಿಗೆ ಬಲಿ!

ಬಳ್ಳಾರಿ, ಜ. 01: ಜನಾರ್ದನ ರೆಡ್ಡಿ ಮನೆ ಮುಂದೆ ನಡೆದ ಬ್ಯಾನರ್‌ ಗಲಾಟೆಯಲ್ಲಿ ಕಾಂಗ್ರೆಸ್‌ನ ಕಾರ್ಯಕರ್ತ, ಶಾಸಕ ನಾರಾ ಭರತ್‌ ರೆಡ್ಡಿ ಬೆಂಬಲಿಗ ರಾಜಶೇಖರ್ ಮೃತಪಟ್ಟಿದ್ದಾರೆ. ಗಲಾಟೆ ವಿಕೋಪದ ಬಳಿಕ ಪೊಲೀಸರು ರೆಡ್ಡಿ ಮನೆಯ ಬಳಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.

ಜನವರಿ 3 ರಂದು ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬಳ್ಳಾರಿಯ ಹವಂಬಾವಿ ನಗರದಲ್ಲಿರುವ ಜನಾರ್ದನ ರೆಡ್ಡಿ ಮನೆ ಮುಂಭಾಗ ಬ್ಯಾನರ್‌ ಅಳವಡಿಕೆ ಮಾಡಲು ಒಂದು ಗುಂಪು ಮುಂದಾಗಿತ್ತು.

ಈ ವೇಳೆ ಬ್ಯಾನರ್ ಹಾಕದಂತೆ ರೆಡ್ಡಿ ಅಪ್ತರು ಅಡ್ಡಿ ಪಡಿಸಿದ್ದಾರೆ. ಈ ವೇಳೆ ಮಾತಿನ ಚಕಮಕಿ ನಡೆದು ಪರಸ್ಪರ ಕಲ್ಲು ತೂರಿದ್ದಾರೆ. ಉದ್ವಿಗ್ನ ವಾತಾವರಣ ನಿರ್ಮಾಣವಾದ ಬೆನ್ನಲ್ಲೇ ಸ್ಥಳಕ್ಕೆ ಮಾಜಿ ಸಚಿವ ಶ್ರೀರಾಮುಲು ಆಗಮಿಸಿದ್ದಾರೆ. ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಆಪ್ತ ಸತೀಶ್ ರೆಡ್ಡಿ ಕೂಡಾ ಘಟನಾ ಸ್ಥಳಕ್ಕೆ ಬಂದಿದ್ದಾರೆ. ಈ ಸಂದರ್ಭದಲ್ಲಿ ಎರಡು ಕಡೆ ಮಾತಿನ ಚಕಮಕಿ ನಡೆದದು ಪೊಲೀಸರು ಲಾಠಿ ಚಾರ್ಜ್‌ ಮಾಡಿ ಜನರನ್ನು ಚದುರಿಸಿದ್ದಾರೆ.

ಪೊಲೀಸರು ಲಾಠಿ ಚಾರ್ಜ್‌ ಮಾಡಿದರೂ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಖಾಸಗಿ ಗನ್‌ಮ್ಯಾನ್‌ಗಳು ಫೈರಿಂಗ್‌ ಮಾಡಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.

ಗುಂಡಿನ ದಾಳಿಗೆ ಕಾಂಗ್ರೆಸ್‌ ಕಾರ್ಯಕರ್ತ ರಾಜಶೇಖರ್ ಮೃತಪಟ್ಟಿದ್ದಾರೆ. ಕಾಂಗ್ರೆಸ್‌ ಕಾರ್ಯಕರ್ತನಿಗೆ ಗುಂಡಿನ ಹಾರಿಸಿದರು ಯಾರು ಎನ್ನುವುದು ತಿಳಿದು ಬಂದಿಲ್ಲ.

ನಾರಾ ಭರತ್‌ ರೆಡ್ಡಿ ಪ್ರತಿಕ್ರಿಯಿಸಿ, ಜನಾರ್ದನ ರೆಡ್ಡಿ ಬೆಂಬಲಿಗರ ಮಾಡಿದ ಗಲಾಟೆಯಲ್ಲಿ ನಮ್ಮ ಕಾರ್ಯಕರ್ತ ಮೃತಪಟ್ಟಿದ್ದಾರೆ. ಹೀಗಾಗಿ ಜನಾರ್ದನ ರೆಡ್ಡಿ ಮತ್ತು ಬೆಂಬಲಿಗರನ್ನು ಕೂಡಲೇ ಬಂಧಿಸಬೇಕು. ವಾಲ್ಮೀಖಿ ಕಾರ್ಯಕ್ರಮವನ್ನು ತಡೆಯಲು ಕಳೆದ 1 ತಿಂಗಳಿನಿಂದ ಇವರು ಬಹಳ ಪ್ರಯತ್ನ ಪಡುತ್ತಿದ್ದರು. ಈಗ ಗಲಾಟೆ ಮಾಡುವ ಮೂಲಕ ಕಾರ್ಯಕ್ರಮ ನಿಲ್ಲಿಸಲು ಮುಂದಾಗಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ಶ್ರೀರಾಮುಲು ಪ್ರತಿಕ್ರಿಯಿಸಿ, ಗುಂಡಿನ ದಾಳಿಯನ್ನು ನಾವು ಯಾರು ಮಾಡಿಲ್ಲ. ಜನಾರ್ದನ ರೆಡ್ಡಿ ಮತ್ತು ನನಗೆ ಸರ್ಕಾರವೇ ಗನ್‌ ಮ್ಯಾನ್‌ ನೀಡಿದೆ. ಅವರು ಯಾರು ಫೈರ್‌ ಮಾಡಿಲ್ಲ. ಇಂದು ತಂತ್ರಜ್ಞಾನದಲ್ಲಿ ಯಾವ ಗನ್‌ನಿಂದ ಬುಲೆಟ್‌ ಹಾರಿದೆ ಎನ್ನುವುದು ಗೊತ್ತಾಗುತ್ತದೆ. ಆ ಬುಲೆಟ್‌ ಅನ್ನು ವಿಧಿವಿಜ್ಞಾನ ಲ್ಯಾಬ್‌ಗೆ ಕಳುಹಿಸಿ ಕಂಡು ಹಿಡಿಯಲಿ. ನಮ್ಮ ಕಡೆಯಿಂದ ಯಾರು ಫೈರ್‌ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ನೀವು ರಸ್ತೆಯಲ್ಲಿ ಎಲ್ಲಿ ಬೇಕಾದರೂ ಕಟ್ಟಿಕೊಳ್ಳಿ. ಆದರೆ ನಮ್ಮ ಮನೆಯ ಮುಂದೆ ಬ್ಯಾನರ್‌ ಕಟ್ಟಿದರೆ ಸಂಚಾರಕ್ಕೆ ಸಮಸ್ಯೆ ಆಗುತ್ತದೆ ಎಂದು ನಾವು ಮೊದಲೇ ಅವರಿಗೆ ಹೇಳಿದ್ದೆವು. ಆದರೆ ಅದನ್ನು ಮೀರಿ ಅವರು ನಮ್ಮ ಮನೆಯ ಮುಂದೆಯೇ ಕಟ್ಟಿದ್ದಾರೆ. ನಾವು ರಾಜಕಾರಣ ಮಾಡುತ್ತೇವೆ. ಆದರೆ ನಮ್ಮ ವಿರೋಧಿ ಪಕ್ಷದವರ ಮನೆಯ ಮುಂದೆ ಹೋಗಿ ಗಲಾಟೆ ಮಾಡುವುದಿಲ್ಲ. ಆದರೆ ಅವರು ರೆಡ್ಡಿ ಅವರ ಮನೆ ಮುಂದೆ ಬ್ಯಾನರ್‌ ಕಟ್ಟಿದ್ದಾರೆ ಅಷ್ಟೇ ಅಲ್ಲದೇ ಚಯರ್‌ ಹಾಕಿ ಕುಳಿತು ರೌಡಿಗಳ ರೀತಿ ವರ್ತನೆ ಮಾಡಿದ್ದಾರೆ ಎಂದು ದೂರಿದರು.