

ಡೈಲಿ ವಾರ್ತೆ: ಫೆ./16/2026
ಪಾರಂಪಳ್ಳಿ ಪಡುಕರೆ ಶೀ ಗುರು ಶನೀಶ್ವರ ದೇವಸ್ಥಾನ ಜೀರ್ಣೋದ್ಧಾರಕ್ಕೆ ಲಕ್ಕಿ ಡ್ರಾ ಕೂಪನ್ ಯೋಜನೆಗೆ ಚಾಲನೆ

ಕೋಟ: ಪಾರಂಪಳ್ಳಿ ಪಡುಕರೆ ಶೀ ಗುರು ಶನೀಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ, ಸುತ್ತು ಪೌಳಿ ನಿರ್ಮಾಣ ಹಾಗೂ ಇತರೆ ಅಭಿವೃದ್ಧಿ ಕಾರ್ಯಗಳಿಗೆ ನಿಧಿ ಸಂಗ್ರಹಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾದ ಲಕ್ಕಿ ಡ್ರಾ ಕೂಪನ್ ಯೋಜನೆಯ ಪ್ರಾತ್ಯಕ್ಷಿಕೆಯನ್ನು ದೇವಸ್ಥಾನದ ಗೌರವ ಅಧ್ಯಕ್ಷರಾದ ಶ್ರೀಯುತ ಆನಂದ ಸಿ. ಕುಂದರ್ ಅವರು ಅಧಿಕೃತವಾಗಿ ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಈ ಯೋಜನೆಯ ಮೂಲಕ ದೇವಸ್ಥಾನದ ಪುನರ್ ನಿರ್ಮಾಣ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಸಾರ್ವಜನಿಕರ ಸಹಕಾರವನ್ನು ಪಡೆಯಲು ನಿರ್ಧರಿಸಲಾಗಿದೆ.
ಲಕ್ಕಿ ಡ್ರಾ ಯೋಜನೆಯಲ್ಲಿ ಪ್ರಥಮ ಬಹುಮಾನವಾಗಿ ಸುಜುಕಿ ಸ್ಕೂಟರ್, ದ್ವಿತೀಯ ಬಹುಮಾನವಾಗಿ ರೆಫ್ರಿಜರೇಟರ್, ತೃತೀಯ ಬಹುಮಾನವಾಗಿ ಎಲ್.ಇ.ಡಿ ಟಿವಿ, ನಾಲ್ಕನೇ ಬಹುಮಾನವಾಗಿ ಬೆಳ್ಳಿ ನಾಣ್ಯ ಹಾಗೂ ಐದು ಸಮಾಧಾನಕರ ಬಹುಮಾನಗಳನ್ನು ಘೋಷಿಸಲಾಗಿದೆ.
ಈ ಸಂದರ್ಭದಲ್ಲಿ ದೇವಸ್ಥಾನದ ಅಧ್ಯಕ್ಷ ಸತೀಶ್ ಮೆಂಡನ್, ಕೋಟತಟ್ಟು ಗ್ರಾಮ ಪಂಚಾಯತ್ ಸದಸ್ಯ ರವೀಂದ್ರ ತಿಂಗಳಾಯ, ಆಡಳಿತ ಮಂಡಳಿಯ ಪ್ರಮುಖರಾದ ರಾಮ ಎಂ. ಬಂಗೇರ, ವಿಜಯ್ ಪೂಜಾರಿ, ರತ್ನಾಕರ ಪೂಜಾರಿ, ನರಸಿಂಹ ಪೂಜಾರಿ, ದಿನೇಶ್, ಪ್ರತಾಪ್ ಪೂಜಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳಿಗೆ ಭಕ್ತರು ಹಾಗೂ ಸಾರ್ವಜನಿಕರು ಉದಾರ ಸಹಕಾರ ನೀಡುವಂತೆ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.