ಡೈಲಿ ವಾರ್ತೆ:JAN/02/2026

ಮೃತ ಕಾಂಗ್ರೆಸ್ ಕಾರ್ಯಕರ್ತನ ದೇಹ ಹೊಕ್ಕಿರೋದು ಪೊಲೀಸ್ ಬುಲೆಟ್ ಅಲ್ಲ: ಎಸ್‌ಪಿ ಸ್ಪಷ್ಟನೆ, ಜನಾರ್ದನ ರೆಡ್ಡಿ, ಶಾಸಕ ರಾಮುಲು ಸೇರಿ 11 ಮಂದಿ ವಿರುದ್ಧ ಪ್ರಕರಣ ದಾಖಲು

ಬಳ್ಳಾರಿ, ಜ. 02: ಬ್ಯಾನರ್ ಅಳವಡಿಕೆ ವಿಚಾರದಲ್ಲಿ ನಡೆದ ಗಲಾಟೆಯಲ್ಲಿ ಮೃತಪಟ್ಟ ಕಾಂಗ್ರೆಸ್ ಕಾರ್ಯಕರ್ತನ ದೇಹ ಹೊಕ್ಕಿರೋದು ಪೊಲೀಸ್ ಬುಲೆಟ್ ಅಲ್ಲ ಎಂದು ಎಸ್‌ಪಿ ರಂಜಿತ್ ಕುಮಾರ್ ಭಂಡಾರು ಸ್ಪಷ್ಟಪಡಿಸಿದ್ದಾರೆ.

ಮೃತ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ದೇಹ ಹೊಕ್ಕಿದ್ದು ಖಾಸಗಿ ವ್ಯಕ್ತಿಯ ರಿವಾಲ್ವರ್‌ನ ಬುಲೆಟ್. ನಿನ್ನೆ ಗಲಾಟೆ ವೇಳೆ ರಾಜಶೇಖರ ಸಾವಾಗಿದೆ. ಪೊಲೀಸರು ಫೈರ್ ಮಾಡಿದಾಗ ತಗುಲಿರುವ ಬುಲೆಟ್ ಅಲ್ಲ. ಆದರೆ, ಅದು ಖಾಸಗಿ ರಿವಾಲ್ವಾರ್ ಬುಲೆಟ್ ಎಂದು ಎಸ್‌ಪಿ ತಿಳಿಸಿದ್ದಾರೆ.

ಇದರ ಬಗ್ಗೆ ತನಿಖೆ ಮಾಡ್ತೇವೆ, ಮಾಹಿತಿ ಸಂಗ್ರಹಿಸ್ತಿದ್ದೇವೆ. ಸಿಸಿ ಕ್ಯಾಮೆರಾಗಳ ಪರಿಶೀಲನೆಯನ್ನೂ ಮಾಡ್ತೇವೆ. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಭರತ್ ರೆಡ್ಡಿ ಬೆಂಬಲಿಗರು ನಾಲ್ಕು ಕೇಸ್ ದಾಖಲಿಸಿದ್ದಾರೆ. ಖಾಸಗಿ ವ್ಯಕ್ತಿ ಫೈರ್ ಮಾಡಿರೋ ಬಗ್ಗೆ ಪರಿಶೀಲಿಸ್ತೇವೆ ಹೇಳಿದ್ದಾರೆ.

ಶಾಸಕ ಜನಾರ್ದನ ರೆಡ್ಡಿ ಮನೆ ಬಳಿ ಬ್ಯಾನರ್ ಅಳವಡಿಕೆ ವಿಚಾರವಾಗಿ ಗಲಾಟೆ ನಡೆದು ಫೈರಿಂಗ್ ಆಗಿತ್ತು. ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ನಡುವೆ ಜಟಾಪಟಿಯಾಗಿತ್ತು. ಈ ವೇಳೆ ನಡೆದ ಫೈರಿಂಗ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್‌ಗೆ ಗುಂಡು ತಗುಲಿ ಮೃತಪಟ್ಟಿದ್ದಾರೆ.

ಪ್ರಕರಣ ಸಂಬಂಧ ಶಾಸಕ ಜನಾರ್ದನ ರೆಡ್ಡಿ, ಸೋಮಶೇಖರ್ ರೆಡ್ಡಿ, ಶ್ರೀರಾಮುಲು ಸೇರಿದಂತೆ 11 ಮಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಮೊದಲ ಆರೋಪಿಯನ್ನಾಗಿ ಜನಾರ್ದನ ರೆಡ್ಡಿ, ಎರಡನೇ ಆರೋಪಿಯನ್ನಾಗಿ ಮಾಜಿ ಶಾಸಕ ಜಿ. ಸೋಮಶೇಖರ ರೆಡ್ಡಿ ಹಾಗೂ ಶಾಸಕ ಮತ್ತು ಮಾಜಿ ಸಚಿವ ಬಿ. ಶ್ರೀರಾಮುಲು ಮೂರನೇ ಆರೋಪಿ, ಮತ್ತು ಬಳ್ಳಾರಿ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕ ಶ್ರೀನಿವಾಸ್ ಮೋತ್ಕರ್ ನಾಲ್ಕನೇ ಆರೋಪಿ. ಎಫ್‌ಐಆರ್‌ನಲ್ಲಿ 11 ಜನರನ್ನು ಹೆಸರಿಸಲಾಗಿದೆ.