ಡೈಲಿ ವಾರ್ತೆ: ಫೆ./15/2026

ಜಾರಿಗೆಕಟ್ಟೆ ಕೊರಗಜ್ಜ ಕ್ಷೇತ್ರದ ಧರ್ಮದರ್ಶಿ ದಿವಾಕರ ಪೂಜಾರಿ ಹೃದಯಾಘಾತದಿಂದ ನಿಧನ

ಮುಂಡ್ಕೂರು, ಫೆ.15: ಜಾರಿಗೆಕಟ್ಟೆ ಕೊರಗಜ್ಜ ಕ್ಷೇತ್ರದ ಧರ್ಮದರ್ಶಿ ದಿವಾಕರ ಪೂಜಾರಿ (60) ಅವರು ಫೆಬ್ರವರಿ 15 ರಂದು ಹೃದಯಾಘಾತದಿಂದ ನಿಧನ ಹೊಂದಿದರು.

ಕಾಸರಗೋಡಿನಲ್ಲಿ ದೈವ ದರ್ಶನಕ್ಕಾಗಿ ತೆರಳಿದ್ದ ಸಂದರ್ಭದಲ್ಲಿ ಅಸ್ವಸ್ಥಗೊಂಡ ಅವರು ಆಸ್ಪತ್ರೆಗೆ ದಾಖಲಿಸಲ್ಪಟ್ಟರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು.

ಮೃತರು ಪತ್ನಿ, ಒಬ್ಬ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಕ್ಷೇತ್ರದ ಭಕ್ತವೃಂದ ಹಾಗೂ ಗ್ರಾಮಸ್ಥರು ಆಳವಾದ ಸಂತಾಪ ವ್ಯಕ್ತಪಡಿಸಿದ್ದಾರೆ.

ಮುಂಡ್ಕೂರು ಜಾರಿಗೆಕಟ್ಟೆಯ ಕೊರಗಜ್ಜ ಕ್ಷೇತ್ರದ ಜಾರಿಗೆಕಟ್ಟೆಯಲ್ಲಿ ಕೊರಗಜ್ಜ, ಕೊರಗರ ಪಂಜುರ್ಲಿ ಸೇರಿದಂತೆ ವಿವಿಧ ಪರಿವಾರ ಶಕ್ತಿಗಳ ಆರಾಧನೆ ನಡೆಯುತ್ತಿದ್ದು, ಸಹಸ್ರಾರು ಭಕ್ತರು ಹರಕೆ ಹಾಗೂ ಸೇವೆಗಾಗಿ ಆಗಮಿಸುತ್ತಿದ್ದರು. ಕ್ಷೇತ್ರದಲ್ಲಿ ನಿರಂತರ ಕೋಲ, ಅಗೇಲು ಸೇವೆಗಳು ಜರುಗುತ್ತಿದ್ದು, ಎಲ್ಲಾ ಧರ್ಮಗಳ ಭಕ್ತರೂ ಸಮಾನವಾಗಿ ಪಾಲ್ಗೊಳ್ಳುತ್ತಿದ್ದ ವಿಶೇಷತೆ ಈ ಕ್ಷೇತ್ರಕ್ಕಿತ್ತು. ದಿವಾಕರ ಪೂಜಾರಿ ಅವರು ಧರ್ಮದರ್ಶಿಯಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದಷ್ಟೇ ಅಲ್ಲದೆ, ಮುಂಡ್ಕೂರು ಪೊಸಾಲು ಬ್ರಹ್ಮ ಶ್ರೀ ನಾರಾಯಣ ಗುರು ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದರು. ಸಂಘದ ನೂತನ ಕಟ್ಟಡ ನಿರ್ಮಾಣದಲ್ಲಿಯೂ ಅವರು ಪ್ರಮುಖ ಪಾತ್ರ ವಹಿಸಿದ್ದರು.

ಅವರ ಅಗಲಿಕೆಯಿಂದ ಧಾರ್ಮಿಕ ಹಾಗೂ ಸಾಮಾಜಿಕ ವಲಯದಲ್ಲಿ ತುಂಬಲಾರದ ನಷ್ಟ ಉಂಟಾಗಿದೆ.