

ಡೈಲಿ ವಾರ್ತೆ: ಫೆ./16/2026
ಮಹಾಶಿವರಾತ್ರಿ ಜಾಗರಣೆಗೆ ಹೋಗಿದ್ದವರ ಮನೆಗೆ ನುಗ್ಗಿದ ಕಳ್ಳರು: 154 ಗ್ರಾಂ ಚಿನ್ನ ಸಮೇತ ಲಕ್ಷಾಂತರ ಮೌಲ್ಯದ ದೋಚಾಟ!

ವಿಜಯಪುರ, ಫೆ.16: ಮಹಾಶಿವರಾತ್ರಿ ಜಾಗರಣೆಯನ್ನೇ ಬಂಡವಾಳ ಮಾಡಿಕೊಂಡು ಖದೀಮರು ಮನೆ ಕಳ್ಳತನ ಮಾಡಿರುವ ಘಟನೆ ವಿಜಯಪುರ ನಗರದ ಶಾರದಾ ನಗರದಲ್ಲಿ ನಡೆದಿದೆ.
ಸೋಮಶೇಖರ ಗಣಿ ಅವರ ಮನೆಯನ್ನು ಗುರಿಯಾಗಿಸಿಕೊಂಡ ಕಳ್ಳರು, ಮನೆಯಲ್ಲಿದ್ದ ಸುಮಾರು ₹40 ಸಾವಿರ ನಗದು, 154 ಗ್ರಾಂ ಚಿನ್ನಾಭರಣ ಹಾಗೂ 270 ಗ್ರಾಂ ಬೆಳ್ಳಿ ಆಭರಣಗಳನ್ನು ಕದ್ದು ಪರಾರಿಯಾಗಿದ್ದಾರೆ. ಕುಟುಂಬಸ್ಥರು ಮಹಾಶಿವರಾತ್ರಿ ನಿಮಿತ್ತ ಶಿವಗಿರಿಗೆ ತೆರಳಿದ್ದರಿಂದ ಮನೆಗೆ ಬೀಗ ಹಾಕಲಾಗಿತ್ತು.
ಇದೇ ವೇಳೆ ಇಂಡಿಯಾ, ಪಾಕ್ ಟಿ20 ಕ್ರಿಕೆಟ್ ಪಂದ್ಯ ನಡೆಯುತ್ತಿದ್ದ ಹಿನ್ನೆಲೆ ಬೀದಿಯಲ್ಲೂ ಜನ ಸಂಚಾರ ಕಡಿಮೆಯಾಗಿದ್ದು, ಇದನ್ನೇ ಸದುಪಯೋಗಪಡಿಸಿಕೊಂಡ ಕಳ್ಳರು ಕೃತ್ಯ ಎಸಗಿರುವ ಸಾಧ್ಯತೆ ವ್ಯಕ್ತವಾಗಿದೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ಗೋಲಗುಂಬಜ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆರಳಚ್ಚು ತಜ್ಞರು ಹಾಗೂ ಶ್ವಾನದಳದ ಸಹಾಯದಿಂದ ಸಾಕ್ಷ್ಯ ಸಂಗ್ರಹ ಕಾರ್ಯ ನಡೆಯಿತು. ಗೋಲಗುಂಬಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.