ಡೈಲಿ ವಾರ್ತೆ:JAN/02/2026

ಶಾರೂಕ್ ನಾಲಿಕೆ ಕತ್ತರಿಸಿದವರಿಗೆ ₹1 ಲಕ್ಷ ಬಹುಮಾನ: BJP ನಾಯಕನ ವಿವಾದಿತ ಹೇಳಿಕೆ

ಲಖನೌ, ಜ. 02: ಇತ್ತೀಚೆಗೆ ತಾನೆ ಉತ್ತರ ಪ್ರದೇಶ ಬಿಜೆಪಿಯ ಹಿರಿಯ ನಾಯಕ ಮತ್ತು ಮಾಜಿ ಶಾಸಕ ಸಂಗೀತ್ ಸೋಮ್ ಅವರು ಬಾಲಿವುಡ್‌ ನಟ ಶಾರೂಕ್ ಖಾನ್ ಅವರನ್ನು ದೇಶದ್ರೋಹಿ ಎಂದು ಕರೆದಿದ್ದರು. ಇದೀಗ ಇನ್ನೋರ್ವ ಬಿಜೆಪಿ ನಾಯಕ ಶಾರೂಕ್ ಖಾನ್ ಅವರ ನಾಲಿಗೆ ಕತ್ತರಿಸಿದವರಿಗೆ ₹1 ಲಕ್ಷ ನಗದು ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ 2026ನೇ ಆವೃತ್ತಿಗಾಗಿ ನಡೆದ ಮಿನಿ ಹರಾಜಿನಲ್ಲಿ ಬಾಂಗ್ಲಾದೇಶದ ವೇಗಿ ಮುಸ್ತಾಫಿಜು‌ರ್ ರೆಹಮಾನ್‌ ಅವರನ್ನು ₹9.20 ಕೋಟಿ ಕೊಟ್ಟು ಖರೀದಿಸಿರುವುದಕ್ಕಾಗಿ ಕೊಲ್ಕತ್ತ ನೈಟ್ ರೈಡರ್ಸ್ ಹಾಗೂ ಅದರ ಮಾಲೀಕ ಶಾರೂಕ್ ಖಾನ್ ವಿರುದ್ಧ ಬಿಜೆಪಿ ಮುಖಂಡರು ಹಾಗೂ ಅನೇಕ ಹಿಂದೂ ಸ್ವಾಮೀಜಿಗಳು ಕಿಡಿಕಾರುತ್ತಿದ್ದಾರೆ.

ಅಖಿಲ ಭಾರತ ಹಿಂದೂ ಮಹಾಸಭಾದ ಆಗ್ರಾ ಜಿಲ್ಲಾ ಘಟಕದ ಅಧ್ಯಕ್ಷೆಯಾಗಿರುವ ಮೀರಾ ಠಾಕೂರ್ ಅವರು, ಗುರುವಾರ ಮಥುರಾದಲ್ಲಿ ಸುದ್ದಿಗೋಷ್ಠಿ ನಡೆಸಿ ಶಾರೂಕ್ ಖಾನ್ ಅವರ ನಾಲಿಗೆ ಕತ್ತರಿಸಿದವರಿಗೆ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

‘ಬಾಂಗ್ಲಾದೇಶದಲ್ಲಿ ನಮ್ಮ ಹಿಂದೂ ಸಹೋದರರನ್ನು ಜೀವಂತವಾಗಿ ಸುಡಲಾಗುತ್ತಿದೆ. ಆದರೆ, ನಮ್ಮ ದೇಶದಲ್ಲಿ ಅಲ್ಲಿಯ ಆಟಗಾರರಿಗೆ ಹಣ ಕೊಟ್ಟು ಖರೀದಿಸಲಾಗುತ್ತಿದೆ. ಅದಕ್ಕೆ ನಾವು ಅವಕಾಶ ನೀಡುವುದಿಲ್ಲ’ ಎಂದು ಇನ್ನೋರ್ವ ಹಿಂದೂ ಮುಖಂಡ ರಾಥೋಡ್ ಕಿಡಿಕಾರಿದ್ದಾರೆ.

ಅಯೋಧ್ಯೆ ಸೇರಿದಂತೆ, ಅನೇಕ ಹಿಂದೂ ಧಾರ್ಮಿಕ ಕೇಂದ್ರಗಳ ಸ್ವಾಮೀಜಿಗಳು, ಮುಸ್ತಾಫಿಜು‌ರ್ ರೆಹಮಾನ್ ಐಪಿಎಲ್ ಆಡುವುದನ್ನು ವಿರೋಧಿಸಿದ್ದಾರೆ.

‘ಐಪಿಎಲ್‌ನಲ್ಲಿ ಬಾಂಗ್ಲಾದೇಶದ ಆಟಗಾರರು ಆಡಬೇಕೋ? ಬೇಡವೋ? ಎಂಬುದರ ಕುರಿತು ಬಿಸಿಸಿಐ ನಿರ್ಧಾರ ತೆಗೆದುಕೊಳ್ಳುತ್ತದೆ. ಆದರೆ ಬಾಂಗ್ಲಾದೇಶದ ಕ್ರಿಕೆಟಿಗರು ಅಲ್ಲಿನ ಹಿಂದೂಗಳ ಭದ್ರತೆಯ ಕುರಿತು ಧ್ವನಿ ಎತ್ತಬೇಕು’ ಎಂದು ಪ್ರಮುಖ ಕಥಾವಾಚಕರಾದ ಧೀರೇಂದ್ರ ಶಾಸ್ತ್ರಿ ಆಗ್ರಹಿಸಿದರು.

ಇನ್ನೋರ್ವ ಆಧ್ಯಾತ್ಮಿಕ ಗುರು ಫಲಹರಿ ಮಹಾರಾಜ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು, ಶಾರೂಕ್ ಖಾನ್ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಹಾಗೂ ಅವರನ್ನು ಬಾಂಗ್ಲಾದೇಶಕ್ಕೆ ಗಡಿಪಾರು ಮಾಡುವಂತೆ ಒತ್ತಾಯಿಸಿದ್ದಾರೆ.