
ಡೈಲಿ ವಾರ್ತೆ:JAN/02/2026
ಬಳ್ಳಾರಿ ಗಲಭೆಗೆ ಎಸ್ಪಿ ತಲೆದಂಡ: ಅಧಿಕಾರ ಸ್ವೀಕರಿಸಿದ ಒಂದೇ ದಿನಕ್ಕೆ ಪವನ್ ನೆಜ್ಜೂರು ಅಮಾನತು

ಬೆಂಗಳೂರು, ಜ. 02: ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ನಿವಾಸದ ಮುಂದೆ ನಡೆದ ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಎಸ್‌ಪಿ ತಲೆದಂಡವಾಗಿದೆ.
ನಿನ್ನೆ(ಜ.1) ರಂದು ಬಳ್ಳಾರಿ ಎಸ್‌ಪಿಯಾಗಿ ಪವನ್ ನೆಜ್ಜೂರ್ ಶೋಭಾರಾಣಿ ಅವರಿಂದ ಅಧಿಕಾರ ಸ್ವೀಕರಿಸಿದ್ದರು. ಈಗ ಬ್ಯಾನರ್ ಗಲಾಟೆ ಪ್ರಕರಣವನ್ನು ಸರಿಯಾಗಿ ನಿರ್ವಹಣೆ ಮಾಡಿಲ್ಲ ಎಂಬ ಕಾರಣ ನೀಡಿ ಅಮಾನತು ಮಾಡಲಾಗಿದೆ.
ಬಳ್ಳಾರಿ ರೇಂಜ್ ಡಿಐಜಿ ಅವರು ಈ ಪ್ರಕರಣವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿಲ್ಲ. ಹೀಗಾಗಿ ಇವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ವರದಿ ನೀಡಿದ್ದರು. ಇನ್ನೊಂದು ಕಡೆ ಡಿಜಿ ಅಂಡ್ ಐಜಿಪಿ ಕಡೆಯಿಂದ ಸರ್ಕಾರಕ್ಕೆ ಅಮಾನತುಗೊಳಿಸುವಂತೆ ವರದಿ ಸಲ್ಲಿಕೆಯಾಗಿತ್ತು. ಹೀಗಾಗಿ ಪವನ್ ನೆಜ್ಜೂರ್ ಅವರನ್ನು ಅಮಾನತುಗೊಳಿಸಿ ಸರ್ಕಾರ ಆದೇಶ ಪ್ರಕಟಿಸಿದೆ.