ಡೈಲಿ ವಾರ್ತೆ:JAN/07/2026

ಹೊನ್ನಾವರ| ಕಾರು ಪಲ್ಟಿಯಾಗಿ ಬೆಂಕಿಗೆ ಆಹುತಿ – ಇಬ್ಬರು ಸಜೀವ ದಹನ!

ಹೊನ್ನಾವರ ಜ.07: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಗೇರುಸೊಪ್ಪ–ಸುಳೆಮುರ್ಕಿ ಕ್ರಾಸ್ ಹತ್ತಿರ ಭೀಕರ ರಸ್ತೆ ಅಪಘಾತ ಸಂಭವಿಸಿದೆ.

ಈ ವೇಳೆ ಕಾರು ಪಲ್ಟಿಯಾಗಿ ಬೆಂಕಿಗೆ ಆಹುತಿಯಾದ ಪರಿಣಾಮ ಇಬ್ಬರು ಸಜೀವ ದಹನಗೊಂಡಿದ್ದಾರೆ. ನಿನ್ನೆ ತಡರಾತ್ರಿ ಘಟನೆ ನಡೆದಿರುವ ಸಾಧ್ಯತೆ ಇದ್ದು, ವೇಗವಾಗಿ ಚಲಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಮೊದಲು ಮರಕ್ಕೆ ಡಿಕ್ಕಿ ಹೊಡೆದಿದೆ. ನಂತರ ಕಂದಕಕ್ಕೆ ಉರುಳಿರುವ ಅನುಮಾನ ವ್ಯಕ್ತವಾಗಿದೆ. ಕಂದಕಕ್ಕೆ ಬೀಳುತ್ತಿದ್ದಂತೆ ಬೆಂಕಿ ಹೊತ್ತಿಕೊಂಡಿದ್ದು, ಕ್ಷಣಾರ್ಧದಲ್ಲಿ ಕಾರು ಹೊತ್ತಿ ಉರಿದಿದೆ.

ಕಾರಿನಲ್ಲಿದ್ದ ಇಬ್ಬರು ಪ್ರಯಾಣಿಕರು ಹೊರಬರಲಾಗದೇ ಸಜೀವ ದಹನವಾಗಿದ್ದಾರೆ. ಬೆಂಕಿಯ ತೀವ್ರತೆಗೆ ಕಾರು ಹಾಗೂ ಮೃತರ ಗುರುತು ಪತ್ತೆಯಾಗದಷ್ಟು ಸುಟ್ಟು ಕರಕಲಾಗಿದೆ.

ಕಾರಿನ ನಂಬರ್ ಪ್ಲೇಟ್ ಸಹ ಸಂಪೂರ್ಣವಾಗಿ ಸುಟ್ಟು ಹೋಗಿರುವುದರಿಂದ, ವಾಹನದ ಮಾಲೀಕತ್ವ ಹಾಗೂ ಮೃತರ ಗುರುತು ಪತ್ತೆ ಮಾಡುವುದು ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ.

ಘಟನಾ ಸ್ಥಳಕ್ಕೆ ಹೊನ್ನಾವರ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸುವ ಕಾರ್ಯಾ ನಡೆಸಿದ್ದಾರೆ. ಪ್ರಸ್ತುತ ಕಾರು ಮತ್ತು ಮೃತರ ಗುರುತು ಪತ್ತೆಗಾಗಿ ಪೊಲೀಸರು ವಿಶೇಷ ತನಿಖೆ ಕೈಗೊಂಡಿದ್ದಾರೆ. ಹೊನ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತದ ನಿಖರ ಕಾರಣ ಹಾಗೂ ಮೃತರ ವಿವರ ಪತ್ತೆ ಹಚ್ಚುವ ಕೆಲಸ ಮುಂದುವರಿದಿದೆ.