ಡೈಲಿ ವಾರ್ತೆ:JAN/08/2026

ಹಳಿಯಾಳ: KSRTC ಬಸ್ ಮರಕ್ಕೆ ಡಿಕ್ಕಿ – 20 ಜನರಿಗೆ ಗಾಯ

ಹಳಿಯಾಳ, ಜ.08 : ಕೆಎಸ್‌ಆರ್‌ಟಿಸಿ ಬಸ್ಸೊಂದು ಮತ್ತೊಂದು ವಾಹನವನ್ನು ಹಿಂದಿಕ್ಕುವ ಭರದಲ್ಲಿ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದು ಚಾಲಕ ಸೇರಿದಂತೆ ಕನಿಷ್ಠ 20 ಪ್ರಯಾಣಿಕರು ಗಾಯಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಬನಸಗೇರಿ ಗ್ರಾಮದ ಬಳಿ ಗುರುವಾರ ಸಂಭವಿಸಿದೆ.

ಕೆಎಸ್‌ಆರ್‌ಟಿಸಿ ಬಸ್ ಚಾಲಕ ಇನ್ನೊಂದು ವಾಹನವನ್ನು ಹಿಂದಿಕ್ಕಲು ಪ್ರಯತ್ನಿಸುತ್ತಿದ್ದಾಗ ಎದುರುಗಡೆಯಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಒಮ್ಮೆಲೇ ಬ್ರೇಕ್ ಹಾಕಿದ್ದರಿಂದ ಬಸ್ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ಪರಿಣಾಮ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಜೋಗನ್ಕೊಪ್ಪ ಗ್ರಾಮದ ನಿವಾಸಿ, ಹಳಿಯಾಳದ ಶಾಲೆಯ ಸೀಮಂತ್ ಮಹಾಂತೇಶ್ ಕಮ್ಮಾರ್ (10) ವಿದ್ಯಾರ್ಥಿ ಮುಂಭಾಗದ ಸೀಟು ಮತ್ತು ಎಂಜಿನ್ ವಿಭಾಗದ ನಡುವೆ ಸಿಲುಕಿಕೊಂಡನು.
ಸಿಲುಕಿಕೊಂಡಿದ್ದ ಆ ಬಾಲಕನನ್ನು ಹೊರತರಲು
ರಕ್ಷಣಾ ಸಿಬ್ಬಂದಿ ಗ್ಯಾಸ್ ಕಟ್ಟರ್ ಬಳಸಿ ಮುಂಭಾಗದ ಸೀಟಿನ ಭಾಗಗಳನ್ನು ಕತ್ತರಿಸಿ ಸುಮಾರು ಒಂದು ಗಂಟೆ ಕಾಲ ರಕ್ಷಣಾ ಕಾರ್ಯಾಚರಣೆ ನಡೆಸಿ
ಸುರಕ್ಷಿತವಾಗಿ ಹೊರತೆಗೆದರು. ಅದೃಷ್ಟವಶಾತ್ ಬಾಲಕ ಗಂಭೀರ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಹಳಿಯಾಳ ಡಿಪೋಗೆ ಸೇರಿದ ಕೆಎಸ್‌ಆರ್‌ಟಿಸಿ ಬಸ್ ಹುಬ್ಬಳ್ಳಿಯ ಕಲಘಟಗಿಯಿಂದ ಹಳಿಯಾಳಕ್ಕೆ ಪ್ರಯಾಣಿಸುತ್ತಿತ್ತು.
ಬಸ್ಸಿನಲ್ಲಿ ಎಂಟು ವಿದ್ಯಾರ್ಥಿನಿಯರು, ಇಬ್ಬರು ಮಹಿಳೆಯರು ಮತ್ತು ಇಬ್ಬರು ಶಾಲಾ ಮಕ್ಕಳು ಸೇರಿದಂತೆ ಸುಮಾರು 40 ಪ್ರಯಾಣಿಕರು ಬಸ್‌ನಲ್ಲಿದ್ದರು.
ಒಟ್ಟು 20 ಪ್ರಯಾಣಿಕರು ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಹಳಿಯಾಳದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತದಲ್ಲಿ ಬಸ್ಸಿನ ಮುಂಭಾಗವು ತೀವ್ರವಾಗಿ ಹಾನಿಗೊಳಗಾಗಿತ್ತು.
ಅಪಘಾತದಲ್ಲಿ ಬಸ್ ಚಾಲಕನಿಗೆ ಗಂಭೀರ ಗಾಯಗಳಾಗಿವೆ. ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.