ಡೈಲಿ ವಾರ್ತೆ:JAN/12/2026

ನಯನಾ ಮೋಟಮ್ಮಗೆ ಅಶ್ಲೀಲ ಕಮೆಂಟ್‌ : ಆರೋಪಿ ಬಂಧನ – ಬಟ್ಟೆ ಬಗ್ಗೆ ಮಾತನಾಡಿದ್ದಕ್ಕೆ ಶಾಸಕಿ ಕಿಡಿ

ಚಿಕ್ಕಮಗಳೂರು, ಜ.12: ನಟಿ ರಮ್ಯಾ, ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಬೆನ್ನಲ್ಲೇ ಶಾಸಕಿ ನಯನಾ ಮೋಟಮ್ಮ ಅವರಿಗೆ ಅಶ್ಲೀಲ ಕಮೆಂಟ್‌ಗಳು ಬಂದಿದ್ದು, ಈ ಸಂಬಂಧ ಮೂಡಿಗೆರೆ ಪೊಲೀಸ್ ‌ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಪ್ರಕರಣದಲ್ಲಿ ರಾಮನಗರ ಮೂಲದ ಯಕ್ಷಿತ್ ರಾಜ್ ಎಂಬಾತನನ್ನು ಬಂಧಿಸಲಾಗಿದೆ. ಇನ್ನು ಈ ಬಗ್ಗೆ ಶಾಸಕಿ ನಯನಾ ಮೋಟಮ್ಮ ಮಾತನಾಡಿ, ಅಶ್ಲೀಲ ಕಮೆಂಟ್‌ ಹಾಕುವವರ ವಿರುದ್ಧ ಕಿಡಿಕಾರಿದ್ದಾರೆ.

ಅಶ್ಲೀಲ ‌‌ಕಾಮೆಂಟ್ ವಿಚಾರವಾಗಿ ಅಕ್ಟೋಬರ್​ನಲ್ಲೇ ನಯನಾ ಮೋಟಮ್ಮ‌ ಅವರ ಪಿಎ ದೂರು ನೀಡಿದ್ದರು. ಇದಕ್ಕೆ ಸಂಬಂಧಿಸಿ ಬೆಂಗಳೂರಿನಲ್ಲಿ ಕೆಲಸ‌ ಮಾಡುತ್ತಿದ್ದ ಹಾಗೂ ರಾಮನಗರ ಮೂಲದ ಯಕ್ಷಿತ್ ರಾಜ್ ಎಂಬಾತನನ್ನು ಬಂಧಿಸಿದ್ದಾರೆ. ಈತ ಬಟ್ಟೆ ವಿಚಾರವಾಗಿ ಶಾಸಕಿಗೆ ಅಶ್ಲೀಲ ಕಮೆಂಟ್ಸ್ ಮಾಡಿದ್ದ ಎನ್ನಲಾಗಿದೆ.

ಈ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ ಅವರು, ನನಗೆ ಎರಡು ಇನ್ಸ್ಟಾಗ್ರಾಮ್ ಖಾತೆ ಇದೆ. ಒಂದು ರಾಜಕೀಯಕ್ಕೆ ಸಂಬಂಧಿಸಿದ್ದು, ಮತ್ತೊಂದು ನನ್ನ ಪರ್ಸನಲ್. ಪರ್ಸನಲ್ ಖಾತೆಯಲ್ಲಿ ಕೆಟ್ಟ ಕಮೆಂಟ್ ಮಾಡುತ್ತಿದ್ದಾರೆ. ಕೆಲವರು ನನ್ನನ್ನು ವೇಶ್ಯೆ ಎಂದು ಕರೆಯುವ ಮಟ್ಟಕ್ಕೂ ಇಳಿಯುತ್ತಾರೆ ಎಂದು ಹೇಳಿದ್ದಾರೆ.

ರಾಜಕೀಯಕ್ಕೆ ಪ್ರವೇಶ ಮಾಡುವ ಮುನ್ನ ಹೇಗಿದ್ದೆ ಅದೇ ರೀತಿ ಈಗಲೂ ಇರಲು ಪ್ರಯತ್ನ ಮಾಡುತ್ತೇನೆ. ನಾನು ನನ್ನ ಜೀವನವನ್ನು ಪಾರದರ್ಶಕವಾಗಿ ನಡೆಸಬೇಕು. ರಾಜಕೀಯವಾಗಿ ಯಾವುದೇ ಮುಚ್ಚುಮರೆ ಇರಬಾರದು. ನಮ್ಮ ವೈಯಕ್ತಿಕ ಜೀವವನ್ನು ಸಾರ್ವಜನಿಕರೊಂದಿಗೆ ಹಂಚಿಕೊಳ್ಳಬೇಕು ಎಂದಿದ್ದಾರೆ.

ನನಗೂ ಗಂಡ, ಮಕ್ಕಳಿದ್ದಾರೆ, ಫ್ರೆಂಡ್ಸ್ ಇದ್ದಾರೆ. ಬಟ್ಟೆಗಳ ಬಗ್ಗೆ ಮಾತಾಡುತ್ತಾ, ಎಂಎಲ್ಎ, ಗುಂಡಿ ಮುಚ್ಚಿಲ್ಲ ಎಂದು ಪರ್ಸನಲ್ ಆಗಿ ಟಾರ್ಗೆಟ್ ಮಾಡಿ ಕಾಮೆಂಟ್ ‌ಮಾಡುತ್ತಾರೆ, ಇದು ಸರಿಯಲ್ಲ ಎಂದು ನಯನಾ ಮೋಟಮ್ಮ ಹೇಳಿದ್ದಾರೆ.

ರಾಜ್ಯದಲ್ಲಿ 11 ಜನ ಮಹಿಳಾ ಶಾಸಕರಿದ್ದೇವೆ. ನನ್ನ ಎರಡು ಇನ್ಸ್ಟಾಗ್ರಾಮ್ , ಫೇಸ್ಬುಕ್ ಖಾತೆಯನ್ನು ಪಬ್ಲಿಕ್‌ನಲ್ಲಿ ಇಟ್ಟಿದ್ದೇನೆ. ಇದು ತಪ್ಪಾ? ಪಾರದರ್ಶಕವಾಗಿ ಜೀವನ ಮಾಡುವುದು ತಪ್ಪಾ? ಇದೆ ಕಾರಣಕ್ಕೆ ರಾಜಕಾರಣಿಗಳು ಅವರ ವೈಯಕ್ತಿಕ ಜೀವನವನ್ನು ಮುಚ್ಚಿಡುತ್ತಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.