

ಡೈಲಿ ವಾರ್ತೆ:JAN/19/2026


ಕಚೇರಿಯಲ್ಲೇ ಡಿಜಿಪಿ ರಾಮಚಂದ್ರ ರಾವ್ ಮಹಿಳೆಯೊಂದಿಗೆ ರಾಸಲೀಲೆ: ವರದಿ ನೀಡುವಂತೆ ಗೃಹ ಇಲಾಖೆಗೆ ಸಿಎಂ ಸೂಚನೆ

ಬೆಳಗಾವಿ: ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿಜಿಪಿ ರಾಮಚಂದ್ರ ರಾವ್ ಅವರು ಕಚೇರಿಯಲ್ಲೇ ಮಹಿಳೆಯೊಂದಿಗೆ ರಾಸಲೀಲೆ ನಡೆಸಿದ ವಿಡಿಯೋ ವೈರಲ್ ಆಗಿದ್ದು, ಈ ಬಗ್ಗೆ ವರದಿ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಇಲಾಖೆಗೆ ಸೂಚನೆ ನೀಡಿದ್ದಾರೆ.
ರಾಮಚಂದ್ರ ರಾವ್ ಅವರು ಸಮವಸ್ತ್ರದಲ್ಲಿರುವಾಗಲೇ ತಮ್ಮ ಕಚೇರಿಯ ಒಳಗಡೆಯೇ ಮಹಿಳೆಯನ್ನು ತಪ್ಪಿಕೊಂಡಿರುವ ವಿಡಿಯೋ ಈಗ ವೈರಲ್ ಆಗಿದ್ದು, ಇದು 1 ವರ್ಷದ ಹಿಂದೆ ಸೆರೆಯಾಗಿದ್ದ ವಿಡಿಯೋ ಎನ್ನಲಾಗಿದೆ.
“ವಿಡಿಯೋ ಬಗ್ಗೆ ನನಗೆ ಬೆಳಗ್ಗೆಯಷ್ಟೇ ಗೊತ್ತಾಗಿದೆ. ಎಷ್ಟೇ ದೊಡ್ಡವರಾದ್ರು ಅವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು. ಈ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿ ವರದಿ ನೀಡುವಂತೆ ಗೃಹ ಇಲಾಖೆಗೆ ಸೂಚಿಸಿದ್ದೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಪರಮೇಶ್ವರ ಭೇಟಿಗೆ ಯತ್ನ:
ವಿಡಿಯೋ ವೈರಲ್ ಆಗುತ್ತಿದ್ದಂತೆ, ರಾಮಚಂದ್ರ ರಾವ್ ಅವರು ಗೃಹ ಸಚಿವ ಡಾ. ಜಿ ಪರಮೇಶ್ವರ ಅವರನ್ನು ಭೇಟಿ ಮಾಡಲು ಅವರ ನಿವಾಸಕ್ಕೆ ಧಾವಿಸಿದರು. ಆದರೆ ರಾವ್ ಭೇಟಿಗೆ ಪರಮೇಶ್ವರ ನಿರಾಕರಿಸಿದ್ದಾರೆ ಎನ್ನಲಾಗಿದೆ.
ಗೃಹ ಸಚಿವರ ಮನೆಯ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಇದು ಹೇಗೆ ಮತ್ತು ಯಾವಾಗ ನಡೆಯಿತು, ಯಾರು ಅದನ್ನು ಮಾಡಿದ್ದಾರೆಂದು ನಾನು ಯೋಚಿಸುತ್ತಿದ್ದೇನೆ. ಈ ಯುಗದಲ್ಲಿ ಏನು ಬೇಕಾದರೂ ಮಾಡಬಹುದು. ಅದರ ಬಗ್ಗೆ ನನಗೆ ಗೊತ್ತಿಲ್ಲ ಎಂದರು.
ನನ್ನ ವಿರುದ್ಧ ಷಡ್ಯಂತ್ರ:
ವೈರಲ್ ವಿಡಿಯೋ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ನಾನು ಕೂಡ ಇಂದು ಆ ವಿಡಿಯೋವನ್ನು ನೋಡಿದ್ದೇನೆ. ಅದು ಸಂಪೂರ್ಣವಾಗಿ ಕೃತಕ ಬುದ್ಧಿಮತ್ತೆ (AI) ಬಳಸಿ ಸೃಷ್ಟಿಸಿದ ಅಥವಾ ಎಡಿಟ್ ಮಾಡಿದ ವಿಡಿಯೋ ಆಗಿದೆ. ನನ್ನ ವೃತ್ತಿಜೀವನಕ್ಕೆ ಕಪ್ಪುಚುಕ್ಕೆ ಹಚ್ಚಲು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಈ ರೀತಿಯ ಷಡ್ಯಂತ್ರ ರೂಪಿಸಿವೆ’ ಎಂದು ಸಮರ್ಥಿಸಿಕೊಂಡಿದ್ದಾರೆ.
ಇದರಿಂದ ನನಗೆ ಆಘಾತವಾಗಿದೆ. ಇದೆಲ್ಲವೂ ಕಟ್ಟುಕಥೆ, ಸುಳ್ಳು ವಿಡಿಯೋ ಎಂದರು. ಅಲ್ಲದೆ ಮುಂದಿನ ಕ್ರಮದ ಬಗ್ಗೆ ಕೇಳಿದಾಗ, ಅವರು ತಮ್ಮ ವಕೀಲರೊಂದಿಗೆ ಈ ಬಗ್ಗೆ ಚರ್ಚಿಸುವುದಾಗಿ ತಿಳಿಸಿದರು.