

ಡೈಲಿ ವಾರ್ತೆ:JAN/22/2026


ಜ. 28ರಂದು ಭಟ್ಕಳದಲ್ಲಿ ರಾಜ್ಯ ಮಟ್ಟದ ಪತ್ರಕರ್ತರ ವಿಚಾರ ಸಂಕಿರಣ ಹಾಗೂ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭ – ಭಟ್ಕಳ ತಂಝಿಮ್ ಅಧ್ಯಕ್ಷ ಇನಾಯತುಲ್ಲ ಶಾಭಂದ್ರಿ ಅವರಿಗೆ ಆಮಂತ್ರಣ ಪತ್ರಿಕೆ ನೀಡಿದ ಕಾನಿಪ ಭಟ್ಕಳ ತಂಡ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ನಗರದಲ್ಲಿ ಇದೇ ಜನವರಿ 28, 2026ರಂದು ನಡೆಯಲಿರುವ ರಾಜ್ಯ ಮಟ್ಟದ ಪತ್ರಕರ್ತರ ವಿಚಾರ ಸಂಕಿರಣ ಹಾಗೂ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸುವಂತೆ ಭಟ್ಕಳ ತಂಜಿಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಅವರಿಗೆ ಕಾನಿಪ ಭಟ್ಕಳ ಪದಾಧಿಕಾರಿಗಳು ಬುಧವಾರ ಸಂಜೆ ಭಟ್ಕಳ ತಂಜಿಮ್ ಕಚೇರಿಯಲ್ಲಿ ಭೇಟಿ ನೀಡಿ ಅಧಿಕೃತ ಆಮಂತ್ರಣ ಪತ್ರಿಕೆಯನ್ನು ನೀಡಿದರು. ಈ ಸಂದರ್ಭದಲ್ಲಿ ತಂಜಿಮ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಕೀಬ್ ಎಂ.ಜೆ ಅವರಿಗೂ ಸಹ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಯಿತು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ – ಭಟ್ಕಳ ಘಟಕದ ಆಶ್ರಯದಲ್ಲಿ ಆಯೋಜಿಸಲಾಗಿರುವ ಈ ಕಾರ್ಯಕ್ರಮವು ಭಟ್ಕಳದ ನಾಗಯಕ್ಷೆ ಧರ್ಮಾರ್ಥ ಸಭಾಭವನದಲ್ಲಿ ನಡೆಯಲಿದ್ದು, ಪೂಜ್ಯ ಶ್ರೀ ಮಾರುತಿ ಗುರೂಜಿ ಅವರು ಸಮಾರಂಭಕ್ಕೆ ದಿವ್ಯ ಸಾನಿಧ್ಯವನ್ನು ವಹಿಸಲಿದ್ದಾರೆ.
ಕಾರ್ಯಕ್ರಮವನ್ನು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಹಾಗೂ ಮಾಜಿ ಲೋಕಾಯುಕ್ತರಾದ ಸಂತೋಷ್ ಹೆಗಡೆ ಮತ್ತು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಮಂಕಾಳ್ ವೈದ್ಯ ಅವರು ಉದ್ಘಾಟಿಸಲಿದ್ದಾರೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿಯ ರಾಜ್ಯಾಧ್ಯಕ್ಷರ ಉಪಸ್ಥಿತಿಯಲ್ಲಿ ಗ್ಯಾರಂಟಿ ನ್ಯೂಸ್ ಮುಖ್ಯಸ್ಥೆ ರಾಧಾ ಹಿರೇಗೌಡರ್ ಹಾಗೂ ಶ್ರೀ ಗಂಗಾಧರ್ ಮೊದಲಿಯಾರ್ ಅವರು ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಮಾಜಿ ಸಚಿವ ಶಿವಾನಂದ ನಾಯ್ಕ್, ಭಟ್ಕಳ ತಂಜಿಮ್ ಸಂಸ್ಥೆಯ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಹೈಕೋರ್ಟ್ ವಕೀಲ ನಾಗೇಂದ್ರ ನಾಯ್ಕ್, ಸುಪ್ರೀಂ ಕೋರ್ಟ್ ವಕೀಲ ಮಂಜುನಾಥ್, ನಾಗಯಕ್ಷೆ ದೇವಸ್ಥಾನದ ಧರ್ಮದರ್ಶಿ ಶ್ರೀ ರಾಮದಾಸ ಪ್ರಭು ಸೇರಿದಂತೆ ಹಲವು ಗಣ್ಯರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ನ್ಯಾಯಮೂರ್ತಿ ಸಂತೋಷ್ ಹೆಗಡೆ ಅವರೊಂದಿಗೆ ವಿದ್ಯಾರ್ಥಿಗಳ ಸಂವಾದ, ರಾಜ್ಯದ ವಿವಿಧ ಕ್ಷೇತ್ರಗಳ ಸಾಧಕರಿಗೆ ರಾಜ್ಯ ಪ್ರಶಸ್ತಿ ಪ್ರದಾನ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಪತ್ರಿಕಾ ವಿತರಕರಿಗೆ ವಿಶೇಷ ಗೌರವ ಪ್ರಶಸ್ತಿಗಳನ್ನು ನೀಡಲಾಗುವುದು.
ಈ ಸಮಾರಂಭಕ್ಕೆ ಕರ್ನಾಟಕ ರಾಜ್ಯದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ 28 ಜಿಲ್ಲೆಗಳ ಸುಮಾರು 200ಕ್ಕೂ ಹೆಚ್ಚು ತಾಲ್ಲೂಕುಗಳಿಂದ 1000ಕ್ಕೂ ಅಧಿಕ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.