

ಡೈಲಿ ವಾರ್ತೆ:JAN/22/2026


ಅಭಿಮತ ‘ಕೀರ್ತಿ ಕಲಶ’ ಮಹಾ ಗೌರವಕ್ಕೆ ನಿವೃತ್ತ ಪೊಲೀಸ್ ಅಧಿಕಾರಿ ದಯಾ ನಾಯಕ್ ಆಯ್ಕೆ

ಬ್ರಹ್ಮಾವರ: ಗಿಳಿಯಾರು ಜನಸೇವಾ ಟ್ರಸ್ಟ್ ಕಳೆದ ಹಲವು ವರ್ಷಗಳಿಂದ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ ಸಲ್ಲಿಸಿರುವ ಗಣನೀಯ ಸೇವೆಯನ್ನು ಸಮಾಜ ಗುರುತಿಸಿ ನೀಡುವ ‘ಕೀರ್ತಿ ಕಲಶ’ ಮಹಾ ಗೌರವವನ್ನು ಈ ಬಾರಿ ಮಹಾರಾಷ್ಟ್ರದ ನಿವೃತ್ತ ಪೊಲೀಸ್ ಅಧಿಕಾರಿ ದಯಾ ನಾಯಕ್ ಅವರಿಗೆ ಪ್ರದಾನಿಸಲಾಗುತ್ತಿದೆ ಎಂದು ಟ್ರಸ್ಟ್‌ನ ಪ್ರವರ್ತಕ ವಸಂತ್ ಗಿಳಿಯಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ವೃತ್ತಿಪರ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆ ಮಾಡಿರುವ ಮೂವರು ಸಾಧಕರಿಗೆ ಪ್ರತಿವರ್ಷ ನೀಡಲಾಗುವ ‘ಯಶೋಗಾಥೆ’ ಪುರಸ್ಕಾರವನ್ನು ಈ ಬಾರಿ ಹಿರಿಯ ತುಳು ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್, ಕಳೆದ 25 ವರ್ಷಗಳಿಂದ ನಿರಂತರವಾಗಿ ಕಲಾಸೇವೆ ಸಲ್ಲಿಸುತ್ತಿರುವ ಯಶಸ್ವಿ ಕಲಾವೃಂದ ಹಾಗೂ ಸಾವಿರಾರು ಮಕ್ಕಳಿಗೆ ಜೀವ ನೀಡಿದ ಬಸ್ರೂರಿನ ಹಿರಿಯ ಸೂಲಗಿತ್ತಿ ಲಕ್ಷ್ಮಿ ಪೂಜಾರಿ ಗುಂಡಿಗೋಳಿ ಅವರಿಗೆ ನೀಡಲಾಗುತ್ತದೆ.
ಬ್ರಹ್ಮಾವರದ ಗಾಂಧಿ ಮೈದಾನದಲ್ಲಿ ಫೆಬ್ರವರಿ 14ರಂದು ಸಂಜೆ 6 ಗಂಟೆಯಿಂದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅವರ ಅಧ್ಯಕ್ಷತೆಯಲ್ಲಿ ನಡೆಯುವ ವಾರ್ಷಿಕ ಉತ್ಸವ ‘ಅಭಿಮತ ಸಂಭ್ರಮ 2026’ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪುರಸ್ಕೃತರಿಗೆ ಗೌರವಪೂರ್ವಕವಾಗಿ ಪ್ರಶಸ್ತಿಗಳನ್ನು ಪ್ರದಾನಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸಮಾಜಸೇವೆಯ ಮೂಲಕ ಜನಮನ ಗೆದ್ದ ಸಾಧಕರನ್ನು ಗೌರವಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಟ್ರಸ್ಟ್ ಮನವಿ ಮಾಡಿದೆ.