ಡೈಲಿ ವಾರ್ತೆ:JAN/22/2026

ಅಮಾಸೆಬೈಲು: ಮನೆ ಬಾಗಿಲು ಮುರಿದು ರೂ.5 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಕಳವು

ಅಮಾಸೆಬೈಲು: ಕುಂದಾಪುರ ತಾಲೂಕಿನ ಮಚ್ಚಟ್ಟು ಗ್ರಾಮದ ಆಯಿಮುಳ್ಳು ಪ್ರದೇಶದಲ್ಲಿ ಮನೆ ಬಾಗಿಲು ಮುರಿದು ಭಾರೀ ಕಳವು ನಡೆದಿರುವ ಘಟನೆ ಬೆಳಕಿಗೆ ಬಂದಿದೆ.
ಈ ಕುರಿತು ಶ್ರೀಮತಿ ಗುಲಾಬಿ ಬೋವಿ (60), ಗಂಡ ನಾಗು ಬೋವಿ ಅವರು ಅಮಾಸೆಬೈಲು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಗುಲಾಬಿ ಬೋವಿ ಯವರು ತಮ್ಮ ಗಂಡನೊಂದಿಗೆ ಆಯಿಮುಳ್ಳು ಪ್ರದೇಶದಲ್ಲಿ ವಾಸವಿದ್ದು, ಗೋವಿಂದ ಕೊಡ್ಗಿ ಅವರ ಮನೆಯ ತೋಟದ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ದಿನಾಂಕ 21-01-2026 ರಂದು ಎಂದಿನಂತೆ ಬೆಳಿಗ್ಗೆ ಕೆಲಸಕ್ಕೆ ತೆರಳಿದ್ದು, ಮಧ್ಯಾಹ್ನ ಊಟದ ವೇಳೆಗೆ ಗುಲಾಬಿ ಬೋವಿ ಯವರು ಮನೆಗೆ ಬಂದಿದ್ದರು. ಬಳಿಕ ಸಂಜೆ 3 ಗಂಟೆ ಸುಮಾರಿಗೆ ಮರುಕಳಿಸಿ ಕೆಲಸಕ್ಕೆ ಹೋಗುವಾಗ ಮನೆಯ ಹಿಂಬದಿ ಮರದ ಬಾಗಿಲಿಗೆ ಒಳಗಿನಿಂದ ಚಿಲಕ ಹಾಕಿ, ಮುಂಬದಿ ಬಾಗಿಲಿಗೆ ಹೊರಗಿನಿಂದ ಬೀಗ ಹಾಕಿದ್ದರು.
ಸಂಜೆ ಸುಮಾರು 6 ಗಂಟೆಗೆ ಮನೆಗೆ ಹಿಂತಿರುಗಿದಾಗ ಮುಂಬದಿ ಬಾಗಿಲಿಗೆ ಒಳಗಿನಿಂದ ಚಿಲಕ ಹಾಕಿರುವುದು ಕಂಡು ಅನುಮಾನಗೊಂಡು ಹಿಂಬದಿ ಬಾಗಿಲು ಮೂಲಕ ಒಳಗೆ ಪ್ರವೇಶಿಸಿದ ವೇಳೆ ಬಾಗಿಲಿನ ಮರದ ಹಲಗೆ ಮುರಿದಿರುವುದು ಹಾಗೂ ಬೆಡ್ರೂಮ್‌ನ ಕಪಾಟನ್ನು ಆಯುಧದಿಂದ ಮೀಟಿ ಜಖಂಗೊಳಿಸಿ ಅದರಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿರುವುದು ಕಂಡು ಬಂದಿದೆ.

ಕಪಾಟಿನಲ್ಲಿ ಇರಿಸಿದ್ದ ಸುಮಾರು 80 ಗ್ರಾಂ ತೂಕದ ವಿವಿಧ ಚಿನ್ನಾಭರಣಗಳು ಹಾಗೂ ಸುಮಾರು 90,000 ರೂ. ನಗದು ಸೇರಿ ಒಟ್ಟು 5 ಲಕ್ಷ 15 ಸಾವಿರ ರೂ. ಮೌಲ್ಯದ ಸೊತ್ತುಗಳನ್ನು ಕಳ್ಳರು ಅಪಹರಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 02/2026 ಕಲಂ 333(1), 305 BNS ರಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.