ಡೈಲಿವಾರ್ತೆ:11/ಮಾರ್ಚ್/2026

ಪೂಜೆಗೆ ಹೋದ ಅರ್ಚಕ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಬಿಗ್ಗ್ ಟ್ವಿಸ್ಟ್ – ಪ್ರಿಯಕರನ ಪ್ರೇಮಪಾಶಕ್ಕೆ
ಅರ್ಚಕನ ಹತ್ಯೆಗೆ ಪತ್ನಿಯೇ ಸುಪಾರಿ!

​ಮಂಡ್ಯ: ಅನೈತಿಕ ಸಂಬಂಧದ ವ್ಯಾಮೋಹಕ್ಕೆ ಬಿದ್ದ ಪತ್ನಿಯೊಬ್ಬಳು, ತನ್ನ ಕಾಮದಾಟಕ್ಕೆ ಅಡ್ಡಿಯಾಗುತ್ತಿದ್ದ ಅರ್ಚಕ ಪತಿಯನ್ನೇ ಪ್ರಿಯಕರನ ಕೈಯಲ್ಲಿ ಭೀಕರವಾಗಿ ಹತ್ಯೆ ಮಾಡಿಸಿ, ಅದನ್ನು ಅಪಘಾತವೆಂದು ಬಿಂಬಿಸಲು ಯತ್ನಿಸಿದ ಘಟನೆ ಮಂಡ್ಯದ ಮರಳಗಾಲದ ಬಳಿ ನಡೆದಿದೆ.

​ಮೃತ ದುರ್ದೈವಿಯನ್ನು ಸಿದ್ದಲಿಂಗಪ್ಪ ಎಂದು ಗುರುತಿಸಲಾಗಿದ್ದು, ಇವರು ವೃತ್ತಿಯಲ್ಲಿ ಅರ್ಚಕರಾಗಿದ್ದರು. ಈ ಕೃತ್ಯದ ಮಾಸ್ಟರ್ ಮೈಂಡ್ ಪತ್ನಿ ಶಾಲಿನಿ ಹಾಗೂ ಆಕೆಯ ಪ್ರಿಯಕರ ಹರೀಶ್ ಮತ್ತು ಆತನ ಇಬ್ಬರು ಸ್ನೇಹಿತರನ್ನು ಪೊಲೀಸರು ಬಲೆಗೆ ಕೆಡವಿದ್ದಾರೆ.

​ಘಟನೆಯ ಹಿನ್ನೆಲೆ: ಒಂದೂವರೆ ವರ್ಷದ ಹಗೆ
​ಮೃತ ಸಿದ್ದಲಿಂಗಪ್ಪ ಹಾಗೂ ಆರೋಪಿ ಶಾಲಿನಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ, ಶಾಲಿನಿ ತನ್ನದೇ ಗ್ರಾಮದ ಹರೀಶ್ ಎಂಬಾತನ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಒಂದೂವರೆ ವರ್ಷದ ಹಿಂದೆಯೇ ಈ ವಿಷಯ ಸಿದ್ದಲಿಂಗಪ್ಪನಿಗೆ ತಿಳಿದುಬಂದಿತ್ತು. ಇಬ್ಬರೂ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಾಗ, ಸಿದ್ದಲಿಂಗಪ್ಪ ಪತ್ನಿಗೆ ಬುದ್ಧಿವಾದ ಹೇಳಿ ಸಂಸಾರ ಸರಿಪಡಿಸಿಕೊಳ್ಳಲು ಯತ್ನಿಸಿದ್ದರು. ಆದರೆ, ಪ್ರಿಯಕರನ ಮೇಲಿನ ವ್ಯಾಮೋಹ ಬಿಡದ ಶಾಲಿನಿ, ಪತಿಯನ್ನೇ ಹಾದಿಯಿಂದ ತಪ್ಪಿಸಲು ಭೀಕರ ಸಂಚು ರೂಪಿಸಿದ್ದಳು.

​ಸ್ಕೆಚ್ ಹಾಕಿದ್ದು ಹೀಗೆ…
​ಮಾರ್ಚ್ 6 ರಂದು ಅರ್ಚಕ ಸಿದ್ದಲಿಂಗಪ್ಪ ಅವರು ಮರಳಗಾಲಕ್ಕೆ ಪೂಜೆಗಾಗಿ ತೆರಳಿದ್ದರು. ಪತಿ ಒಬ್ಬರೇ ತೆರಳುತ್ತಿರುವ ವಿಷಯವನ್ನು ಶಾಲಿನಿ ಕೂಡಲೇ ತನ್ನ ಪ್ರಿಯಕರ ಹರೀಶ್‌ಗೆ ಸಂದೇಶದ ಮೂಲಕ ರವಾನಿಸಿದ್ದಳು. ಯೋಜನೆಯಂತೆ ಹೊಂಚು ಹಾಕಿ ಕುಳಿತಿದ್ದ ಹರೀಶ್ ಮತ್ತು ಆತನ ಇಬ್ಬರು ಸ್ನೇಹಿತರು, ನಾಲೆ ಏರಿಯ ಮೇಲೆ ಬೈಕ್‌ನಲ್ಲಿ ಬರುತ್ತಿದ್ದ ಸಿದ್ದಲಿಂಗಪ್ಪನನ್ನು ಅಡ್ಡಗಟ್ಟಿದ್ದಾರೆ. ಬಳಿಕ ದೊಣ್ಣೆಗಳಿಂದ ತಲೆಗೆ ಬಲವಾಗಿ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ.

​ಅಪಘಾತವೆಂದು ಬಿಂಬಿಸಲು ಸಂಚು:
​ಕೊಲೆಯ ನಂತರ ಸಾಕ್ಷ್ಯ ನಾಶಪಡಿಸಲು ಮುಂದಾದ ಆರೋಪಿಗಳು, ಮೃತದೇಹವನ್ನು ಮತ್ತು ಬೈಕನ್ನು ಸಿಡಿಎಸ್ ನಾಲೆಗೆ ಎಸೆದು ಘಟನೆಯನ್ನು ಅಪಘಾತದಂತೆ ಬಿಂಬಿಸಲು ಪ್ರಯತ್ನಿಸಿದ್ದರು. ಪತಿ ಮನೆಗೆ ಬಾರದ್ದಕ್ಕೆ ಕುಟುಂಬಸ್ಥರು ಹುಡುಕಾಟ ನಡೆಸಿದಾಗ ನಾಲೆ ದಡದಲ್ಲಿ ಚಪ್ಪಲಿ ಮತ್ತು ಬಟ್ಟೆ ಪತ್ತೆಯಾಗಿತ್ತು. ನಂತರ ನಾಲೆಯಲ್ಲಿ ಮೃತದೇಹ ಸಿಕ್ಕಾಗ ಮೊದಲಿಗೆ ಇದು ಅಪಘಾತ ಎನ್ನಲಾಗಿತ್ತು.

​ಪೊಲೀಸರ ಚಾಣಾಕ್ಷತನಕ್ಕೆ ಬಯಲಾದ ರಹಸ್ಯ:
​ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರಿಗೆ ಚಪ್ಪಲಿ ಸಿಕ್ಕ ಜಾಗದಲ್ಲಿ ರಕ್ತದ ಕಲೆಗಳು ಕಂಡುಬಂದಿದ್ದು ತೀವ್ರ ಅನುಮಾನ ಹುಟ್ಟಿಸಿತ್ತು. ತಾಂತ್ರಿಕ ತನಿಖೆ ಮತ್ತು ಶಾಲಿನಿಯ ಮೊಬೈಲ್ ಕರೆಗಳ ವಿವರ (CDR) ಪರಿಶೀಲಿಸಿದಾಗ ಪ್ರಿಯಕರನೊಂದಿಗೆ ಆಕೆ ನಡೆಸಿದ ಸಂಚು ಬಯಲಾಗಿದೆ. ಸದ್ಯ ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಕಠಿಣ ವಿಚಾರಣೆ ನಡೆಸುತ್ತಿದ್ದಾರೆ.