

ಡೈಲಿವಾರ್ತೆ:11/ಮಾರ್ಚ್/2026


“ಜಗತ್ತಿನ ಯುದ್ಧದ ಹೊಡೆತ ಬೆಂಗಳೂರು ಬನಶಂಕರಿಗೆ!” ಗ್ಯಾಸ್ ಕೊರತೆಯಿಂದ ಅನ್ನದಾಸೋಹಕ್ಕೂ ಬೀಗ – ಸರ್ಕಾರ ಎಲ್ಲಿ?

ಬೆಂಗಳೂರು, ಮಾ.11: ಮಧ್ಯಪ್ರಾಚ್ಯದಲ್ಲಿ ಭುಗಿಲೆದ್ದಿರುವ ಇರಾನ್–ಇಸ್ರೇಲ್ ಹಾಗೂ ಅಮೆರಿಕ ನಡುವಿನ ಯುದ್ಧದ ಪರಿಣಾಮ ಈಗ ದೂರದ ಭಾರತದಲ್ಲೂ ಸ್ಪಷ್ಟವಾಗಿ ಕಾಣಿಸಿಕೊಳ್ಳತೊಡಗಿದೆ.
ಜಾಗತಿಕ ರಾಜಕೀಯದ ಹೊಡೆತ ಸಾಮಾನ್ಯ ಜನರ ಬದುಕಿನ ಮೇಲೆ ಬೀಳುತ್ತಿರುವುದಕ್ಕೆ ಮತ್ತೊಂದು ಉದಾಹರಣೆಯಾಗಿ ಬೆಂಗಳೂರು ನಗರದ ಪ್ರಸಿದ್ಧ ಬನಶಂಕರಿ ದೇವಸ್ಥಾನದಲ್ಲಿ ನಡೆಯುತ್ತಿದ್ದ ಉಚಿತ ಅನ್ನ ಪ್ರಸಾದ ವಿತರಣೆಯೇ ತಾತ್ಕಾಲಿಕವಾಗಿ ಸ್ಥಗಿತಗೊಂಡಿರುವುದು ಗಮನಾರ್ಹವಾಗಿದೆ.
ವಾಣಿಜ್ಯ ಎಲ್‌ಪಿಜಿ (LPG) ಸಿಲಿಂಡರ್‌ಗಳ ತೀವ್ರ ಕೊರತೆಯೇ ಈ ನಿರ್ಧಾರಕ್ಕೆ ಪ್ರಮುಖ ಕಾರಣವಾಗಿದೆ. ದೇವಸ್ಥಾನದಲ್ಲಿ ಪ್ರತಿದಿನ ಬೆಳಗ್ಗೆ, ಮಧ್ಯಾಹ್ನ ಹಾಗೂ ಸಂಜೆ ಭಕ್ತರಿಗೆ ಅನ್ನಪ್ರಸಾದ ಸಿದ್ಧಪಡಿಸಲು ಕನಿಷ್ಠ 5 ರಿಂದ 6 ಕಮರ್ಷಿಯಲ್ ಗ್ಯಾಸ್ ಸಿಲಿಂಡರ್‌ಗಳು ಅಗತ್ಯವಿರುತ್ತದೆ. ಆದರೆ ಸದ್ಯ ದೇವಸ್ಥಾನದಲ್ಲಿ ಕೇವಲ 4 ಸಿಲಿಂಡರ್‌ಗಳು ಮಾತ್ರ ಲಭ್ಯವಿದ್ದು, ಅವು ದಿನಪೂರ್ತಿ ನಡೆಯುವ ಅಡುಗೆಗೆ ಸಾಕಾಗದ ಪರಿಸ್ಥಿತಿ ಉಂಟಾಗಿದೆ.
ಗ್ಯಾಸ್ ಪೂರೈಕೆ ಆಗದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಇಂದಿನಿಂದ ಅನ್ನದಾಸೋಹ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದ್ದ ಈ ಸೇವೆ ಅಚಾನಕ್ ನಿಂತಿರುವುದು ಭಕ್ತರಲ್ಲಿ ತೀವ್ರ ಬೇಸರಕ್ಕೆ ಕಾರಣವಾಗಿದೆ.
ಮುಂಜಾನೆ ನೀಡಲಾಗುತ್ತಿದ್ದ ರೈಸ್ ಬಾತ್ ಹಾಗೂ ಸಿಹಿ ಪ್ರಸಾದ, ಜೊತೆಗೆ ಮಧ್ಯಾಹ್ನದ ಅನ್ನದಾಸೋಹಕ್ಕಾಗಿ ಕಾದು ಕುಳಿತುಕೊಳ್ಳುತ್ತಿದ್ದ ಭಕ್ತರಿಗೆ ಇದೀಗ ನಿರಾಶೆ ಎದುರಾಗಿದೆ.
ಪ್ರತಿದಿನ ಸಾವಿರಾರು ಭಕ್ತರು ಹಾಗೂ ಬಡವರು ನೆಚ್ಚಿಕೊಂಡಿದ್ದ ಈ ಅನ್ನಸೇವೆ ನಿಲ್ಲಿಸಿರುವುದಕ್ಕೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ದೇಶದಲ್ಲಿ ಎಷ್ಟೇ ಸಂಕಷ್ಟ ಬಂದರೂ ಧಾರ್ಮಿಕ ಕೇಂದ್ರಗಳಲ್ಲಿ ನಡೆಯುವ ಅನ್ನದಾಸೋಹಕ್ಕೆ ಅಡ್ಡಿಯಾಗಬಾರದು. ಸರ್ಕಾರ ಇಂತಹ ಪ್ರಮುಖ ದೇವಸ್ಥಾನಗಳಿಗೆ ಗ್ಯಾಸ್ ಪೂರೈಕೆಯಲ್ಲಿ ಆದ್ಯತೆ ನೀಡಬೇಕು ಅಥವಾ ಪರ್ಯಾಯ ವ್ಯವಸ್ಥೆ ಮಾಡಬೇಕು” ಎಂದು ಭಕ್ತರು ಒತ್ತಾಯಿಸಿದ್ದಾರೆ.
ಜಾಗತಿಕ ಯುದ್ಧದ ಹೊಡೆತದಿಂದ ಭಕ್ತರ ಹೊಟ್ಟೆಯ ಅನ್ನವೇ ನಿಲ್ಲುವ ಸ್ಥಿತಿ ಉಂಟಾಗಿರುವುದು ಆಡಳಿತ ವ್ಯವಸ್ಥೆಯ ಮೇಲೆಯೇ ಹಲವು ಪ್ರಶ್ನೆಗಳನ್ನು ಎತ್ತಿದೆ. ಈಗಾದರೂ ಸರ್ಕಾರ ಎಚ್ಚೆತ್ತು ಕ್ರಮ ಕೈಗೊಳ್ಳುತ್ತದೆಯೇ ಎಂಬುದು ಕಾದು ನೋಡಬೇಕಾಗಿದೆ.