

ಡೈಲಿವಾರ್ತೆ:11/ಮಾರ್ಚ್/2026


ಆಟೋ ಗ್ಯಾಸ್ ಬೆಲೆ ಏರಿಕೆಯ ವಿರುದ್ಧ ಪುತ್ತೂರಿನಲ್ಲಿ ಪ್ರತಿಭಟನೆ ಕೇಂದ್ರ ಸರಕಾರದ ವಿರುದ್ದ ಗುಡುಗಿದ – ಎಸ್ಡಿಟಿಯು ಜಿಲ್ಲಾಧ್ಯಕ್ಷ ರಹಿಮಾನ್ ಬೋಳಿಯಾರ್

ಪುತ್ತೂರು : ಮಾ10; ಸೋಶಿಯಲ್ ಡೆಮಾಕ್ರಟಿಕ್ ಆಟೋ ಯೂನಿಯನ್ ( ಎಸ್ಡಿಟಿಯು ) ಪುತ್ತೂರು ತಾಲೂಕು ಸಮಿತಿ ವತಿಯಿಂದ ಆಟೋ ಗ್ಯಾಸ್ ಏರಿಕೆಯ ವಿರುದ್ದ ಪುತ್ತೂರಿನ ದರ್ಬೆ ಜಂಕ್ಷನ್ ನಲ್ಲಿ ತಾಲೂಕು ಸಮಿತಿ ಅಧ್ಯಕ್ಷರಾದ ಆಸೀಫ್ ಮುಕ್ವೆರವರ ನೇತೃತ್ವದಲ್ಲಿ ನಡೆಯಿತು.
ಪ್ರತಿಭಟನೆ ಸಭೆಯ ಮೊದಲು ಪುತ್ತೂರು ಗಾಂಧೀಕಟ್ಟೆಯ ಬಳಿಯಿಂದ ಆಟೋ ರಿಕ್ಷಾವನ್ನು ಹಗ್ಗದಲ್ಲಿ ಕಟ್ಟಿ ಎಳೆದುಕೊಂಡು ಹೋಗುವ ಅಣುಕು ರ್ಯಾಲಿ ಕೂಡ ನಡೆಯಿತು.
ಪ್ರತಿಭಟನಾ ಸಭೆಗೆ ಮುಖ್ಯ ಅತಿಥಿಯಾಗಿ ಆಗಮಿಸಿದ ಎಸ್ಡಿಟಿಯು ಮಂಗಳೂರು ನಗರ ಜಿಲ್ಲಾಧ್ಯಕ್ಷರಾದ ರಹಿಮಾನ್ ಬೋಳಿಯಾರ್ ಮಧ್ಯಪ್ರಾಚ್ಯದಲ್ಲಿ ಯುದ್ಧ ನಡೆಯುತ್ತಿದೆ ಆದರೆ ದೇಶದಲ್ಲಿ ಇಂಧನದ ಕೊರತೆ ಇಲ್ಲ ಎಂದು ಗ್ಯಾಸ್ ಎಜೆನ್ಸಿಗಳು ಹೇಳುತ್ತಿರುವಾಗ ಕೇಂದ್ರ ಸರಕಾರ ಯುದ್ಧದ ನೆಪವೊಡ್ಡಿ ಗ್ಯಾಸ್ ಬೆಲೆ ಏರಿಕೆ ಮಾಡಿ ಈಗಾಗಲೇ ನೊಂದಿರುವ ಆಟೋ ಚಾಲಕರ ಬದುಕಿಗೆ ಬರೆ ಎಳೆದಿರುವುದು ಖಂಡನೀಯ ಎಂದರು ಗ್ಯಾಸ್ ಬೆಲೆ ಏರಿಕೆ ಕೂಡಲೇ ಇಳಿಕೆ ಮಾಡಬೇಕು ಇಲ್ಲವಾದಲ್ಲಿ ದೊಡ್ಡಮಟ್ಟದ ಹೋರಾಟ ನಡೆಸುವುದಾಗಿಹೇಳಿದರು.
ವಿರೋಧ ಪಕ್ಷದಲ್ಲಿದ್ದಾಗ ಒಂದು ರೂಪಾಯಿ ಏರಿಕೆ ಮಾಡಿದಾಗ ಬೀದಿಗೆ ಬರುತ್ತಿದ್ದ ಬಿಜೆಪಿ ನಾಯಕರು ಎಲ್ಲಿದ್ದಾರೆ. ನಿಮ್ಮ ಗ್ಯಾಸ್ ಸಿಲಿಂಡರ್, ಸೌಧೆ ಎಲ್ಲಿದೆ. ಪ್ರತಿಯೊಬ್ಬರ ಖಾತೆಗೆ ಜಮೆ ಮಾಡುವ ರೂ.15 ಲಕ್ಷ ಎಲ್ಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಎಲ್ಲಿದೆ. ಪಕೋಡ ಮಾರಿ ಎನ್ನುವುದು ನಿಮ್ಮ ಉದ್ಯೋಗದ ಭರವಸೆಯಾ. ಅಚ್ಚೇದಿನ್ ತರುವುದಾಗಿ ಹೇಳಿ ಇದೀಗ ಮೂರನೇ ಅವಧಿಯಲ್ಲಿ ಆಡಳಿತ ನಡೆಸುತ್ತಿದ್ದು ನಿಮ್ಮ ಅಚ್ಚೇದಿನ್ ಎಲ್ಲಿದೆ. ದೇಶದ ಪ್ರಗತಿ ಎಲ್ಲಿದೆ ಎಂದು ಪ್ರಶ್ನಿಸಿದ ಅವರು ದೇಶದ ಪ್ರಗತಿ ಆಗದಿದ್ದರೂ ಪ್ರಧಾನಿಯವರ ಗಡ್ಡ ಮಾತ್ರ ಬೆಳೆಯುತ್ತಿದೆ. ಯಾವ ದೇಶದಿಂದ ವಸ್ತುಗಳನ್ನು ಆಮದುಮಾಡಿಕೊಳ್ಳಬೇಕು ಎಂದು ಅವಿವೇಕಿ ಅಮೇರಿಕಾದ ಅಧ್ಯಕ್ಷ ಟ್ರಂಪ್ ನಿರ್ಧರಿಸುವ ತನಕ ಬಂದಿರುವುದು, ನಮ್ಮ ದೇಶದಲ್ಲಿ ಯಾವ ನಿರ್ಧಾರ ಕೈಗೊಳ್ಳಲು ಇನ್ನೊಂದು ದೇಶದ ಅಪ್ಪಣೆ ಪಡೆಯಬೇಕಾದ ಸ್ಥಿತಿ ಬಂದಿರುವುದು ಅಚ್ಚೇ ದಿನವಾ ಎಂದು ರಹಿಮಾನ್ ಬೋಳಿಯಾರ್ ಪ್ರಶ್ನಿಸಿದರು.
ಎಸ್‌ಡಿಟಿಯು ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಸಲೀಂ ಗುರುವಾಯನಕೆರೆ ಮಾತನಾಡಿ, ಆಟೋ ಚಾಲಕರು ಬಿಪಿಎಲ್ ಕಾರ್ಡುದಾರರು. ದಿನದ ಬಾಡಿಗೆಯ ಸಂಪಾದನೆಯಲ್ಲಿ ಕಷ್ಟ ಪಟ್ಟು ದುಡಿದು ಕುಟುಂಬ ನಿರ್ವಹಣೆ ಮಾಡಬೇಕು. ಗ್ಯಾಸ್ ಬೆಲೆ ಏರಿಕೆಯನ್ನು ಸರಿದೂಗಿಸಲು ಬಾಡಿಗೆ ದರ ಏರಿಕೆ
ಮಾಡುವಂತಿಲ್ಲ. ದರ ಏರಿಕೆ ಮಾಡಿದರೆ ಜನ ಸಾಮಾನ್ಯರ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಯುದ್ಧದಂತಹ ಯಾವುದೇ ಸಂದರ್ಭ ಬಂದರೂ ದರ ಏರಿಕೆ ಮಾಡಬಾರದು. ದರ ಇಳಿಕೆ ಮಾಡಿ ನ್ಯಾಯ ಒದಗಿಸಬೇಕು. ಆಟೋ ಚಾಲಕರ ಜೀವನದಲ್ಲಿ ಚೆಲ್ಲಾಟವಾಡಬಾರದು. ಇದರ ಬಗ್ಗೆ ಕೇಂದ್ರ ಸರಕಾರ ಹಾಗೂ ಕೇಂದ್ರ ಪೆಟ್ರೋಲಿಯಂ ಇಲಾಖೆ ಕ್ರಮಕೈಗೊಳ್ಳಬೇಕು. ದರ ಇಳಿಕೆ ಮಾಡದಿದ್ದರೆ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಎಸ್‌ಡಿಟಿಯು ಜಿಲ್ಲಾ ಸಮಿತಿ ಸದಸ್ಯ ಕೆ.ಎಸ್ ಹಮೀದ್ ಮಾತನಾಡಿ, ಆಟೋ ಚಾಲಕರೆಂದರೆ ಎಲ್ಲರಿಗೂ ಆಪತ್ಕಾಲದಲ್ಲಿ ನೆರವಾಗುವವರು. ಬಡವರೇ ಆಗಿರುವ ಆಟೋ ಚಾಲಕರು ತಮಗೆ ಅಲ್ಪ ಬಾಡಿಗೆಯಿಂದ ಕಷ್ಟದಲ್ಲಿಯೇ ಜೀವನ ನಡೆಸುವವರು. ದಿನ ನಿತ್ಯದ ಬಳಕೆಯ ವಸ್ತುಗಳ ಬೆಲೆ ಏರಿಕೆಯ ಜೊತೆಗೆ ಇದೀಗ ಗ್ಯಾಸ್ ಬೆಲೆ ಏರಿಕೆ ಮಾಡುವ ಮೂಲಕ ಆಟೋ ಚಾಲಕರನ್ನು ಮತ್ತಷ್ಟು ಸಂಕಷ್ಟಕ್ಕೆ ತಲ್ಲಿದೆ. ವಾಹನದ ಬಿಡಿ ಭಾಗಗಳ ಬೆಲೆಯೂ ಏರಿಕೆಯಾಗುತ್ತಿದೆ. ಇದೀಗ ಪಾಶ್ಚಾತ್ಯ ದೇಶಗಳಲ್ಲಿ ನಡೆಯುತ್ತಿರುವ ಯುದ್ದದ ನೆಪವೊಡ್ಡಿ ಭಾರತದಲ್ಲಿ ಆಟೋ ಗ್ಯಾಸ್ ದರ ಏರಿಕೆ ಮಾಡುವ ಮೂಲಕ ಆಟೋ ಚಾಲಕರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಸಿದರು.
ಈ ಸಂದರ್ಭದಲ್ಲಿ ಎಸ್ಡಿಟಿಯು ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಪೋಲ್ಯಾ ಉಪಾಧ್ಯಕ್ಷರಾದ ಆಸೀಫ್ ಉಪ್ಪಿನಂಗಡಿ ಜೊತೆ ಕಾರ್ಯದರ್ಶಿ ರಹ್ಮಾನ್ ಪಡಿಲ್ ಸದಸ್ಯರಾದ ಮಹಮ್ಮದ್ ಕುಞಿ ಹಾಗೂ ಕಾರ್ಯಕರ್ತರು ನಾಗರಿಕರು ಪ್ರತಿಭಟನಾ ಸಭೆಯಲ್ಲಿ ಉಪಸ್ಥಿತರಿದ್ದರು.
ಪ್ರತಿಭಟನೆ ಸಭೆಯಲ್ಲಿ ಅಲಿ ಅಸ್ಗರ್ ಸವನೂರು ಸ್ವಾಗತಿಸಿ,ನಿರೂಪಿಸಿದರು.