

ಡೈಲಿವಾರ್ತೆ:11/ಮಾರ್ಚ್/2026


ಒಂಟಿ ವೃದ್ಧೆಯ ಕಣ್ಣಿಗೆ ಖಾರದ ಪುಡಿ ಎರಚಿ ಭೀಕರ ಕೊಲೆ; ಚಿನ್ನಾಭರಣ ದೋಚಿ ಕಿರಾತಕರು ಪರಾರಿ!

ಕುಣಿಗಲ್: ತಾಲೂಕಿನ ಹುಲಿಯೂರುದುರ್ಗ ಹೋಬಳಿಯ ಉಜ್ಜಿನಿ ಗ್ರಾಮದಲ್ಲಿ ಮಾನವೀಯತೆ ಮರೆತ ದುಷ್ಕರ್ಮಿಗಳು, ಮನೆಯಲ್ಲಿ ಒಂಟಿಯಾಗಿದ್ದ ಅಸಹಾಯಕ ವೃದ್ಧೆಯನ್ನು ಅತ್ಯಂತ ಕ್ರೂರವಾಗಿ ಕೊಲೆ ಮಾಡಿ ಚಿನ್ನಾಭರಣ ದೋಚಿರುವ ಆತಂಕಕಾರಿ ಘಟನೆ ನಡೆದಿದೆ.
ಘಟನೆಯ ವಿವರ:
ಉಜ್ಜಿನಿ ಗ್ರಾಮದ ನಿವಾಸಿ ನಾಗಮ್ಮ (85) ಎಂಬುವವರೇ ಕೊಲೆಯಾದ ದುರ್ದೈವಿ. ವೃದ್ಧೆ ಮನೆಯಲ್ಲಿ ಒಬ್ಬರೇ ಇರುವುದನ್ನು ಗಮನಿಸಿ ಹೊಂಚು ಹಾಕಿದ್ದ ಕಿರಾತಕರು, ಭಾನುವಾರ ತಡರಾತ್ರಿ ಮನೆಗೆ ನುಗ್ಗಿ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.
ವೃದ್ಧೆಯ ಪ್ರತಿರೋಧವನ್ನು ಹತ್ತಿಕ್ಕಲು ಮೊದಲು ಅವರ ಕಣ್ಣಿಗೆ ಖಾರದ ಪುಡಿ ಎರಚಿದ ದುಷ್ಕರ್ಮಿಗಳು, ಅವರು ಕಿರುಚಾಡದಂತೆ ಹಾಸಿಗೆಯ ದಿಂಬಿನಿಂದ ಮುಖ ಒತ್ತಿ ಹಿಡಿದಿದ್ದಾರೆ. ಉಸಿರುಗಟ್ಟಿದ ಪರಿಣಾಮ ವೃದ್ಧೆ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ನಾಗಮ್ಮ ಅವರ ಸಾವನ್ನು ಖಚಿತಪಡಿಸಿಕೊಂಡ ಬಳಿಕ, ಅವರ ಮೈ ಮೇಲಿದ್ದ ಎರಡು ಚಿನ್ನದ ಬಳೆ ಹಾಗೂ ಕುತ್ತಿಗೆಯಲ್ಲಿದ್ದ ಚೈನ್ ಕಿತ್ತುಕೊಂಡಿದ್ದಾರೆ. ಅಷ್ಟಕ್ಕೇ ನಿಲ್ಲದ ಹಂತಕರು, ಮನೆಯಲ್ಲಿದ್ದ ಬೀರುವನ್ನು ಒಡೆದು ಹಣಕ್ಕಾಗಿ ಇಡೀ ಮನೆಯನ್ನು ಚಲ್ಲಾಪಿಲ್ಲಿ ಮಾಡಿದ್ದಾರೆ.
ಬೆಳಕಿಗೆ ಬಂದಿದ್ದು ಹೇಗೆ?
ನಾಗಮ್ಮ ಅವರ ಮಕ್ಕಳು ಬೆಂಗಳೂರಿನಲ್ಲಿ ವಾಸವಿದ್ದು, ಕಳೆದ ಎರಡು ದಿನಗಳಿಂದ ತಾಯಿಗೆ ಸತತವಾಗಿ ಫೋನ್ ಕರೆ ಮಾಡಿದ್ದಾರೆ. ಆದರೆ, ನಾಗಮ್ಮ ಅವರು ಫೋನ್ ಸ್ವೀಕರಿಸದಿದ್ದಾಗ ಆತಂಕಗೊಂಡ ಮಕ್ಕಳು, ಕೂಡಲೇ ಗ್ರಾಮದ ಪರಿಚಯಸ್ಥರಿಗೆ ವಿಷಯ ತಿಳಿಸಿ ಮನೆಗೆ ಹೋಗಿ ನೋಡುವಂತೆ ವಿನಂತಿಸಿದ್ದಾರೆ. ನೆರೆಹೊರೆಯವರು ಬಂದು ನೋಡಿದಾಗ ವೃದ್ಧೆಯ ಮೃತದೇಹ ಪತ್ತೆಯಾಗಿದ್ದು, ಇಡೀ ಗ್ರಾಮವೇ ಬೆಚ್ಚಿಬಿದ್ದಿದೆ.
ಪೊಲೀಸ್ ತನಿಖೆ:
ವಿಷಯ ತಿಳಿದ ತಕ್ಷಣ ಹುಲಿಯೂರುದುರ್ಗ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ.
”ಒಂಟಿ ಮಹಿಳೆಯನ್ನೇ ಗುರಿಯಾಗಿಸಿಕೊಂಡು ಈ ಕೃತ್ಯ ಎಸಗಲಾಗಿದೆ. ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿದ್ದು, ಶೀಘ್ರದಲ್ಲೇ ಹಂತಕರನ್ನು ಬಂಧಿಸಲಾಗುವುದು,” ಎಂದು ಪೊಲೀಸ್ ಮೂಲಗಳು ತಿಳಿಸಿವೆ.