ಡೈಲಿ ವಾರ್ತೆ:JAN/22/2026

ಧಾರವಾಡದಲ್ಲಿ ಶಾಕಿಂಗ್ ಟ್ವಿಸ್ಟ್: ವೇಲ್‌ನಿಂದಲೇ ಕತ್ತು ಹಿಸುಕಿ ಹತ್ಯೆ – ಪ್ರಿಯಕರನ ಭೀಕರ ಮುಖ ಬಯಲು!

ಧಾರವಾಡ: ಕೆಲಸ ಹುಡುಕಲೆಂದು ಮನೆಯಿಂದ ಹೊರಹೋಗಿದ್ದ 19 ವರ್ಷದ ಯುವತಿ ಝಕಿಯಾ ಮುಲ್ಲಾ ಶವ ಧಾರವಾಡ ನಗರದ ಹೊರಹೊಲಯದ ಮನಸೂರು ರಸ್ತೆಯ ಡೈರಿ ಸಮೀಪ ಪತ್ತೆಯಾಗಿದ್ದ ಪ್ರಕರಣ ಇದೀಗ ಭಾರೀ ತಿರುವು ಪಡೆದುಕೊಂಡಿದೆ.

ಪೊಲೀಸರ ತನಿಖೆಯಲ್ಲಿ ಝಕಿಯಾ ಪ್ರೀತಿಸುತ್ತಿದ್ದ ಪ್ರಿಯಕರ ಸಾಬೀರ್ ಮುಲ್ಲಾನೇ ಆಕೆಯನ್ನು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.

ಪರಸ್ಪರ ಪ್ರೀತಿಸುತ್ತಿದ್ದ ಇವರಿಬ್ಬರ ಮದುವೆಗೆ ಕುಟುಂಬಸ್ಥರೂ ಸಹ ಒಪ್ಪಿಗೆ ಸೂಚಿಸಿದ್ದು, ಮುಂದಿನ ತಿಂಗಳು ನಿಶ್ಚಿತಾರ್ಥ ನಿಗದಿಯಾಗಿತ್ತು. ಆದರೆ ಮದುವೆಯಾಗಬೇಕಿದ್ದ ಪ್ರಿಯಕರನೇ ಝಕಿಯಾಳ ಸಾವಿಗೆ ಕಾರಣನಾಗಿರುವುದು ಎಲ್ಲರನ್ನೂ ಬೆಚ್ಚಿಬೀಳಿಸಿದೆ.

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಝಕಿಯಾ ಮತ್ತು ಸಾಬೀರ್ ಇಬ್ಬರೂ ಸಂಬಂಧಿಕರಾಗಿದ್ದು, ಮದುವೆ ಸಂಬಂಧಿಸಿದ ಮಾತುಕತೆಗಳು ನಡೆದಿದ್ದವು. ಜನವರಿ 20ರ ಸಂಜೆ ಇಬ್ಬರೂ ಹೊರಗೆ ಸುತ್ತಾಡಲು ತೆರಳಿದ್ದರು. ಈ ವೇಳೆ ಮದುವೆ ವಿಚಾರವಾಗಿ ಉಂಟಾದ ವಾಗ್ವಾದ ಜಗಳಕ್ಕೆ ತಿರುಗಿದ್ದು, ಜಗಳ ತೀವ್ರಗೊಂಡಾಗ ಆಕ್ರೋಶಗೊಂಡ ಸಾಬೀರ್, ಝಕಿಯಾ ಧರಿಸಿದ್ದ ವೇಲ್‌ನಿಂದಲೇ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ಆಘಾತಕಾರಿ ಸಂಗತಿಯೆಂದರೆ, ಹತ್ಯೆ ನಡೆದ ತಕ್ಷಣ ಆರೋಪಿ ಸಾಬೀರ್ ಮುಲ್ಲಾ ತಾನೇ ಸ್ವತಃ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಕರೆ ಮಾಡಿ ಕೊಲೆ ಕುರಿತು ಮಾಹಿತಿ ನೀಡಿದ್ದಾನೆ. ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿದಾಗಲೂ ಆತ ಸ್ಥಳದಲ್ಲೇ ಇದ್ದು, ತಾನು ಏನೂ ತಿಳಿಯದವನಂತೆ ವರ್ತಿಸಿದ್ದ. ಆದರೆ ಆತನ ನಡವಳಿಕೆ ಶಂಕಾಸ್ಪದವಾಗಿದ್ದರಿಂದ ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಬಯಲಾಗಿದ್ದು, ಕೊಲೆ ಮಾಡಿರುವುದನ್ನು ಆತ ಒಪ್ಪಿಕೊಂಡಿದ್ದಾನೆ.
ಸದ್ಯ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ ಪೊಲೀಸರು ಆರೋಪಿ ಸಾಬೀರ್ ಮುಲ್ಲಾನನ್ನು ಬಂಧಿಸಿ ಮುಂದಿನ ತನಿಖೆ ನಡೆಸುತ್ತಿದ್ದಾರೆ.

ಮೃತ ಝಕಿಯಾ ಮುಲ್ಲಾಳ ಮರಣೋತ್ತರ ಪರೀಕ್ಷೆ ಪೂರ್ಣಗೊಂಡ ಬಳಿಕ, ಪೊಲೀಸ್ ಸಮ್ಮುಖದಲ್ಲಿ ಆಕೆಯ ಶವವನ್ನು ವಾರಸುದಾರರಿಗೆ ಹಸ್ತಾಂತರಿಸಲಾಗಿದೆ.