
ಡೈಲಿ ವಾರ್ತೆ:JAN/23/2026
ಉಪ್ಪೂರು ಬಳಿ ಭೀಕರ ರಸ್ತೆ ಅಪಘಾತ: ಲಾರಿ ಚಕ್ರದಡಿ ಸಿಲುಕಿ ಬೈಕ್ ಸವಾರ ದಾರುಣ ಅಂತ್ಯ

ಉಡುಪಿ: ರಾಷ್ಟ್ರೀಯ ಹೆದ್ದಾರಿಯ ಉಪ್ಪೂರು ಕೆ.ಜಿ.ರೋಡ್ ಸಮೀಪ ಶುಕ್ರವಾರ ಬೆಳಿಗ್ಗೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರರೊಬ್ಬರು ಲಾರಿಯ ಚಕ್ರದಡಿ ಸಿಲುಕಿ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.
ಬೆಳಿಗ್ಗೆ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಬೈಕ್ ಸವಾರ ಲಾರಿಯೊಂದಿಗೆ ಸಂಭವಿಸಿದ ಅಪಘಾತದ ವೇಳೆ ಲಾರಿಯ ಚಕ್ರದಡಿ ಸಿಲುಕಿಕೊಂಡಿದ್ದಾರೆ. ಅಪಘಾತದ ತೀವ್ರತೆ ಇಷ್ಟರ ಮಟ್ಟಿಗೆ ಇದ್ದು, ಸವಾರನ ದೇಹ ಛಿದ್ರಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು ಬ್ರಹ್ಮಾವರ ತಾಲೂಕಿನ ಮಟಪಾಡಿ ನಿವಾಸಿ ಅಭಿಷೇಕ್ ಎಂದು ಗುರುತಿಸಲಾಗಿದೆ.
ಅಪಘಾತದ ಭೀಕರತೆಗೆ ಸವಾರನ ರುಂಡವು ದೇಹದಿಂದ ಬೇರ್ಪಟ್ಟು ಲಾರಿಯ ಚಕ್ರದಡಿ ಸಿಲುಕಿಕೊಂಡಿತ್ತು ಎನ್ನಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಬ್ರಹ್ಮಾವರ ಪೊಲೀಸ್ ಠಾಣೆಯ ಮುಖ್ಯ ಪೇದೆ ಮಹಾಲಿಂಗ ಅವರು ಸ್ಥಳಕ್ಕೆ ಧಾವಿಸಿ ಮಹಜರು ಕಾರ್ಯಾಚರಣೆ ನಡೆಸಿದರು.
ಸಮಾಜ ಸೇವಕ ನಿತ್ಯಾನಂದ ಒಳಕಾಡು ಹಾಗೂ ಬ್ರಹ್ಮಾವರದ ಅಂಬುಲೆನ್ಸ್ ಚಾಲಕರು ಸ್ಥಳೀಯರ ಸಹಕಾರದೊಂದಿಗೆ ಮೃತದೇಹವನ್ನು ಲಾರಿಯ ಅಡಿಯಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ರವಾನಿಸಿದರು.
ಅಪಘಾತದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರ ವ್ಯತ್ಯಯ ಉಂಟಾಗಿದ್ದು, ಪೊಲೀಸರು ಸಂಚಾರವನ್ನು ನಿಯಂತ್ರಿಸಿದರು. ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತಕ್ಕೆ ಕಾರಣಗಳ ಬಗ್ಗೆ ತನಿಖೆ ಮುಂದುವರಿದಿದೆ.