
ಡೈಲಿ ವಾರ್ತೆ:JAN/22/2026
ಬೆಂಗಳೂರು ಏರ್‌ಪೋರ್ಟ್‌ನಲ್ಲಿ ವಿದೇಶಿ ಮಹಿಳೆಗೆ ಲೈಂಗಿಕ ಕಿರುಕುಳ: ಏರ್ಪೋರ್ಟ್ ಸಿಬ್ಬಂದಿ ಬಂಧನ

ಚಿಕ್ಕಬಳ್ಳಾಪುರ: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿದೇಶಿ ಮಹಿಳೆಗೆ ವಿಮಾನ ನಿಲ್ದಾಣದ ಸಿಬ್ಬಂದಿಯೊಬ್ಬ ಲೈಂಗಿಕ ಕಿರುಕುಳ ನೀಡಿರುವ ಘಟನೆ ಬೆಳಕಿಗೆ ಬಂದಿದೆ.
ಘಟನೆ ಸಂಬಂಧ ಏರ್ ಸಾಟ್ಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಎಫ್.ಡಿ ಆಪ್ಪಾನ್ ಅಹಮದ್ ಎಂಬಾತನನ್ನು ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.
ದಕ್ಷಿಣ ಕೊರಿಯಾ ಮೂಲದ 36 ವರ್ಷದ ಮಹಿಳೆಯೊಬ್ಬರು ಪ್ರವಾಸದ ನಿಮಿತ್ತ ಭಾರತಕ್ಕೆ ಆಗಮಿಸಿದ್ದು, ಮರಳಿ ದಕ್ಷಿಣ ಕೊರಿಯಾಗೆ ತೆರಳಲು ಬೆಂಗಳೂರು ಏರ್‌ಪೋರ್ಟ್‌ಗೆ ಬಂದಿದ್ದರು.
ವಿಮಾನ ನಿಲ್ದಾಣದಲ್ಲಿ ಭದ್ರತಾ ಪರಿಶೀಲನೆ ಮುಗಿಸಿ ಬೋರ್ಡಿಂಗ್ ಪ್ರಕ್ರಿಯೆ ವೇಳೆ ಆರೋಪಿಯು ಮಹಿಳಾ ಪ್ರಯಾಣಿಕರ ಬಳಿ ಬ್ಯಾಗೇಜ್ ಪರಿಶೀಲನೆ ಮಾಡುವ ನೆಪದಲ್ಲಿ ಸಂಪರ್ಕ ಸಾಧಿಸಿದ್ದಾನೆ.
ನಂತರ ವೈಯಕ್ತಿಕ ಪರಿಶೀಲನೆ ನಡೆಸಬೇಕು ಎಂದು ಹೇಳಿ ಆಕೆಯನ್ನು ಪುರುಷರ ಶೌಚಾಲಯದ ಒಳಗೆ ಕರೆದುಕೊಂಡು ಹೋಗಿ, ಅವಾಚ್ಯವಾಗಿ ಮುಟ್ಟುವ ಹಾಗೂ ತಬ್ಬಿಕೊಳ್ಳುವ ಪ್ರಯತ್ನ ನಡೆಸಿದ್ದಾನೆ ಎನ್ನಲಾಗಿದೆ.
ಈ ವೇಳೆ ತೀವ್ರವಾಗಿ ವಿಚಲಿತಳಾದ ಮಹಿಳೆ ಕೂಡಲೇ ಸಿಐಎಸ್‌ಎಫ್ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.
ತಕ್ಷಣ ಸ್ಪಂದಿಸಿದ ಸಿಐಎಸ್‌ಎಫ್ ಸಿಬ್ಬಂದಿ ಆರೋಪಿಯನ್ನು ವಶಕ್ಕೆ ಪಡೆದು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಮಹಿಳೆಯ ದೂರು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಪ್ರಯಾಣಿಕರಿಗೆ ಬೋರ್ಡಿಂಗ್ ಪ್ರಕ್ರಿಯೆಯಲ್ಲಿ ಸಹಾಯ ಮಾಡುವ ಜವಾಬ್ದಾರಿಯಲ್ಲಿದ್ದ ಆರೋಪಿ, ತನ್ನ ಕರ್ತವ್ಯವನ್ನು ದುರುಪಯೋಗಪಡಿಸಿಕೊಂಡು ಗಂಭೀರ ಅಪರಾಧ ಎಸಗಿರುವುದು ತನಿಖೆಯಿಂದ ಸ್ಪಷ್ಟವಾಗಿದ್ದು, ಪ್ರಕರಣದ ಕುರಿತು ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.