ಡೈಲಿ ವಾರ್ತೆ:JAN/23/2026

ಅಂಕೋಲಾ ಹಟ್ಟಿಕೇರಿಯಲ್ಲಿ ರಾಜೀವ ಪಿಕಳೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ !
ಡೆತ್‌ನೋಟ್ ಲಭ್ಯ: ಎಸ್ಪಿ ದೀಪನ್ ಎಂ.ಎನ್.ಘಟನ ಸ್ಥಳಕ್ಕೆ ಭೇಟಿ

ವಿದ್ಯಾಧರ ಮೊರಬಾ

ಅಂಕೋಲಾ : ಔಷಧ ವಿತರಕನೊಬ್ಬ ತನ್ನ ಆತ್ಮರಕ್ಷಣೆಗೆ ಪಡೆದ ಡಬಲ್ ಬ್ಯಾರಲ್‌ಗನ್‌ನಿಂದಲ್ಲೇ ತನ್ನ ಕುತ್ತಿಗೆ ಭಾಗಕ್ಕೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಹಟ್ಟಿಕೇರಿ ಗ್ರಾಪಂ. ವ್ಯಾಪ್ತಿಯ ಮಠಾಕೇರಿ ಗ್ರಾಮದಲ್ಲಿ ಶುಕ್ರವಾರ ಮುಂಜಾನೆ ನಡೆದಿದೆ.

ಕಾರವಾರ ನಗರದ ಪಿಕಳೆ ನರ್ಸಿಂಗ್ ಆಸ್ಪತ್ರೆಯಲ್ಲಿ ಔಷಧ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹಾಲಿ ಹಟ್ಟಿಕೇರಿ ಮಠಾಕೇರಿಯಲ್ಲಿ ವಾಸವಾಗಿದ್ದ ರಾಜೀವ ಶ್ರೀಪಾದ ಪಿಕಳೆ (67) ಎಂಬಾತನೇ ಮನೆ ಮುಂಭಾ ಗದ ತುಳಸಿಕಟ್ಟೆ ಹತ್ತಿರ ಗನ್ನಿನಿಂದ ಕುತ್ತಿಗೆ ಭಾಗಕ್ಕೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.

ಬೆಳಿಗ್ಗೆ 11 ಗಂಟೆ ಸುಮಾರಿಗೆ ಮನೆ ಕೆಲಸಕ್ಕೆ ಬಂದ ಕಾರವಾರದಿಂದ ಬಂದ ಮಹಿಳೆಯೊಬ್ಬಳು ರಾಜೀವ ಪಿಕಳೆ ತುಳಸಿಕಟ್ಟೆ ಹತ್ತಿರ ಮೃತದೇಹ ಕಂಡು ಬಂದ ಹಿನ್ನೆಲೆಯಲ್ಲಿ ಅಕ್ಕಪಕ್ಕದ ಮನೆಯವರಿಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ತಕ್ಷಣವೇ ಪಿಐ ಚಂದ್ರಶೇಖರ ಮಠಪತಿ, ಪಿಎಸ್‌ಐ ಗುರುನಾಥ ಹಾದಿಮನೆ ಘಟನೆ ಸ್ಥಳ ಪರಿಶೀಲಿಸಿದ ವೇಳೆ ಮನೆ ಒಳಗೆ ಡೆತ್‌ನೋಟ್ ಲಭ್ಯವಾಗಿದೆ. ಆಂಗ್ಲಭಾಷೆಯಲ್ಲಿ ನನ್ನ ಸಾವಿಗೆ ನಾನೇ ಕಾರಣ ಎಂದು ಹಸ್ತಕ್ಷರದಲ್ಲಿ ಬರೆದಿಟ್ಟಿರುವುದು ಮಾಹಿತಿ ಲಭ್ಯವಾಗಿದೆ.

ಎಸ್ಪಿ ದೀಪನ್ ಎಂ.ಎನ್. ಸ್ಥಳ ಪರಿಶೀಲನೆ ನಡೆಸಿದರು. ಬಳಿಕ ಮೃತನ ಸಹೋದರ ಡಾ. ನಿತಿನ್ ಪಿಕಳೆ ಅವ ರಿಂದ ಗುಪ್ತ ಮಾಹಿತಿ ಕಲೆಹಾಕಿದ್ದಾರೆ. ಮೃತರ ಇಬ್ಬರು ಗಂಡು ಮಕ್ಕಳು ಸಹ ವೈದ್ಯರಾಗಿ ಸೇವೆ ಸಲ್ಲಿಸು ತ್ತಿದ್ದಾರೆ ಎನ್ನಲಾಗಿದೆ.
ಅವಧಿ ಮೀರಿದ ಮಾತ್ರೆ : ರಾಜೀವ ಪಿಕಳೆ ಅವರು ಕಳೆದ ಹದಿನೈದು ದಿನಗಳ ಹಿಂದೆ ಅವಧಿ ಮೀರಿದ ಮಾತ್ರೆ ವಿತ್ತರಿಸಿದ್ದರು ಎನ್ನುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಹಿನ್ನೆಲೆ ಯಲ್ಲಿ ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದರು ಎನ್ನಲಾಗಿದೆ. ಇದರಿಂದಾಗಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ಮೃತನ ಸಹೋದರ ಡಾ. ನೀತಿನ್ ಪಿಕಳೆ ಸ್ಥಳದಲ್ಲಿ ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾರೆ.

ಎಸ್ಪಿ ಪ್ರತಿಕ್ರಿಯೆ : ಎಸ್ಪಿ ದೀಪನ್ ಮಾಧ್ಯಮದವರೊಂದಿಗೆ ಮಾತನಾಡಿ, ಪ್ರಾಥಮಿಕ ತನಿಖೆಯಲ್ಲಿ ರಾಜೀವ ಪಿಕಳೆ ಅವರ ಬಳಿ ಇದ್ದ ಪರವಾನಿಗೆ ಪಡೆದಿರುವ ಗನ್‌ನಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ತಿಳಿದು ಬಂದಿದೆ. ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಅವಧಿ ಮೀರಿದ ಔಷಧಿ ವಿತರಣೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬಂದಿದೆ ಎನ್ನುವುದನ್ನು ಮಾಹಿತಿ ತಿಳಿದುಕೊಂಡಿದ್ದು, ಈ ಬಗ್ಗೆ ತನಿಖೆ ನಡೆಸಲು ಡಿವೈಎಸ್ಪಿ ಗಿರೀಶ ಅವರಿಗೆ ಸೂಚನೆ ನೀಡಿದ್ದೇವೆ. ಈ ಘಟನೆಯಲ್ಲಿ ತಪ್ಪಿತಸ್ಥರು ಕಂಡು ಬಂದಲ್ಲಿ ಯಾವ ದೇ ಮುಲಾಜಿಲ್ಲದೇ ಕಾನೂನು ಕ್ರಮಕೈಗೊಳ್ಳುತ್ತೇವೆ ಎಂದರು.

ಈ ಸಂದರ್ಭದಲ್ಲಿ ಡೈಎಸ್ಪಿ ಗಿರೀಶ, ಪಿಐ ಚಂದ್ರಶೇಖರ ಮಠಪತಿ, ಪಿಎಸ್‌ಐ ಗುರುನಾಥ ಹಾದಿಮನೆ, ಸಿಬ್ಬಂದಿ ವರ್ಗ, ಶ್ವಾನದಳ, ಬೆರಳಚ್ಚು ತಜ್ಞರು ಸೇರಿದಂತೆ ಅಂಕೋಲಾ ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿಗಳು ಹಾಜರಿದ್ದರು. ಮೃತ ದೇಹವನ್ನು ಸಾಮಾಜಿಕ ಕಾರ್ಯಕರ್ತ ವಿಜಯಕುಮಾರ ನಾಯ್ಕ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಿದರು.