ಡೈಲಿ ವಾರ್ತೆ:JAN/23/2026

ಬಳ್ಳಾರಿಯಲ್ಲಿ ರಾಜಕೀಯ ಕಿಡಿ: ರೆಡ್ಡಿ–ಶ್ರೀರಾಮುಲು ಮಾಡೆಲ್ ಹೌಸ್ ಗೆ ಬೆಂಕಿ, ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪ

ಬಳ್ಳಾರಿ: ಮಾಜಿ ಸಚಿವರಾದ ಜನಾರ್ದನ ರೆಡ್ಡಿ ಹಾಗೂ ಬಿ. ಶ್ರೀರಾಮುಲು ಅವರಿಗೆ ಸೇರಿದ ಮಾಡೆಲ್ ಹೌಸ್‌ನಲ್ಲಿ ಬೆಂಕಿ ಅವಘಡ ಸಂಭವಿಸಿದೆ.

ನಗರದ ಜಿ ಸ್ಕೈರ್ ಲೇಔಟ್‌ನಲ್ಲಿರುವ ಮಾದರಿ ಮನೆ ಇಂದು ಸಂಜೆ ಸುಮಾರು 6.30ರ ವೇಳೆಗೆ ಬೆಂಕಿಗೆ ಆಹುತಿಯಾಗಿದೆ.

ಈ ಘಟನೆಗೆ ಕಾಂಗ್ರೆಸ್ ಕಾರ್ಯಕರ್ತರೇ ಕಾರಣ ಎಂದು ಮಾಜಿ ಶಾಸಕ ಸೋಮಶೇಖರ್ ರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ.

ಇತ್ತೀಚೆಗೆ ನಡೆದ ಬ್ಯಾನರ್ ಗಲಾಟೆ ವೇಳೆ ಬೆಂಕಿ ಹಚ್ಚುವ ಬೆದರಿಕೆ ಹಾಕಲಾಗಿತ್ತು. ಅದೇ ಬೆದರಿಕೆಗೆ ತಕ್ಕಂತೆ ನಮಗೆ ಸೇರಿದ ಮಾಡೆಲ್ ಹೌಸ್‌ಗೆ ಬೆಂಕಿ ಹಚ್ಚಲಾಗಿದೆ ಎಂದು ಅವರು ದೂರಿದ್ದಾರೆ.

ಬೆಂಕಿ ಹಚ್ಚಿದ ಬಳಿಕ ಕೆಲವರು ಸ್ಥಳದಿಂದ ಓಡಿ ಪರಾರಿಯಾಗಿದ್ದಾರೆ. ಅವರನ್ನು ಹಿಡಿಯಲು ಪ್ರಯತ್ನಿಸಿದಾಗ ತಪ್ಪಿಸಿಕೊಂಡಿದ್ದಾರೆ ಎಂದು ಸೋಮಶೇಖರ್ ರೆಡ್ಡಿ ತಿಳಿಸಿದ್ದಾರೆ. ಸುಮಾರು ನೂರು ಎಕರೆ ವಿಸ್ತೀರ್ಣದ ಜಾಗದಲ್ಲಿ ಈ ಲೇಔಟ್ ಅಭಿವೃದ್ಧಿಪಡಿಸಲಾಗಿದ್ದು, ಮನೆ ಖರೀದಿದಾರರಿಗೆ ತೋರಿಸುವ ಉದ್ದೇಶದಿಂದ ಈ ಮಾದರಿ ಮನೆ ನಿರ್ಮಿಸಲಾಗಿತ್ತು ಎಂದು ಮಾಹಿತಿ ನೀಡಿದ್ದಾರೆ.

ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಪೊಲೀಸರು ಭೇಟಿ ನೀಡಿ ಬೆಂಕಿ ನಂದಿಸುವ ಕಾರ್ಯ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಈ ಘಟನೆಯಿಂದ ಬಳ್ಳಾರಿ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ ಮತ್ತು ಉದ್ವಿಗ್ನತೆ ಮೂಡಿದೆ.