

ಡೈಲಿ ವಾರ್ತೆ:JAN/24/2026


ನಕಲಿ ದಾಖಲೆ–ಪೋರ್ಜರಿ ಸಹಿ ಬಳಸಿ ಬ್ಯಾಂಕ್ ಗೆ ವಂಚನೆ: ಬಂಟ್ವಾಳದಲ್ಲಿ ಲಾರಿ ಸಾಲ ಪ್ರಕರಣ ಬಹಿರಂಗ

- ಸಾಲ ಬಾಕಿ ಇದ್ದರೂ ಋಣಭಾರ ತೆಗೆಯಿಸಿ ವಾಹನ ವರ್ಗಾವಣೆ | ಬ್ಯಾಂಕ್ ಆಫ್ ಬರೋಡಾ ದೂರಿನ ಮೇರೆಗೆ ಪ್ರಕರಣ ದಾಖಲು
ಬಂಟ್ವಾಳ: ಬಂಟ್ವಾಳದಲ್ಲಿ ವಾಹನ ಸಾಲ ಬ್ಯಾಂಕಿಗೆ ಬಾಕಿ ಇರುವಾಗಲೇ ಬ್ಯಾಂಕ್ ಅಧಿಕಾರಿಯ ಪೋರ್ಜರಿ ಸಹಿ ಹಾಗೂ ನಕಲಿ ದಾಖಲೆಗಳನ್ನು ಸಿದ್ಧಪಡಿಸಿ, ಸಾಲ ಸಂಪೂರ್ಣ ಪಾವತಿಯಾಗಿದೆಯೆಂದು ನಂಬಿಸಿ ಆರ್‌ಟಿಒ ಕಚೇರಿಯಲ್ಲಿ ಋಣಭಾರ ತೆಗೆಯಿಸಿ, ಲಾರಿಯನ್ನು ಬೇರೆಯವರಿಗೆ ವರ್ಗಾವಣೆ ಮಾಡಿರುವ ಗಂಭೀರ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.
ಈ ಸಂಬಂಧ ಬ್ಯಾಂಕ್ ಆಫ್ ಬರೋಡಾ ಪುತ್ತೂರು ಪ್ರಾದೇಶಿಕ ಕಚೇರಿಯ ಸಹಾಯಕ ಪ್ರಬಂಧಕ ಹಾಗೂ ಪ್ರಾದೇಶಿಕ ಮುಖ್ಯಸ್ಥ ಅಮಿತ್ ಶೆಟ್ಟಿ ಅವರು ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ದೂರಿನ ಮೇರೆಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 12/2026 ರಂತೆ ಪ್ರಕರಣ ದಾಖಲಿಸಲಾಗಿದೆ.
ದೂರು ಪ್ರಕಾರ, ಮೊದಲ ಆರೋಪಿ ತನ್ಸೀರ್ ಮತ್ತು ಅವರ ತಾಯಿ ಎರಡನೇ ಆರೋಪಿ ನೆಬೀಸ ಅವರಿಗೆ ವಾಣಿಜ್ಯ ಉದ್ದೇಶಕ್ಕಾಗಿ ಕೆಎ–70–6270 ನೋಂದಣಿ ಸಂಖ್ಯೆಯ ಅಶೋಕ್ ಲೈಲ್ಯಾಂಡ್ ಲಾರಿಗೆ 2023ರ ಮಾರ್ಚ್ 16ರಂದು ಬ್ಯಾಂಕ್ ಆಫ್ ಬರೋಡಾದಿಂದ 45 ಲಕ್ಷ ರೂಪಾಯಿ ಸಾಲ ಮಂಜೂರು ಮಾಡಲಾಗಿತ್ತು.
ಆದರೆ, ಸಾಲ ಸಂಪೂರ್ಣ ಪಾವತಿಯಾಗದೆ ಇರುವುದರ ನಡುವೆಯೇ, 2024ರ ಅಕ್ಟೋಬರ್ 19ರಂದು ಒಪ್ಪಂದ ಪತ್ರ ಹಾಗೂ ಅಕ್ಟೋಬರ್ 22ರಂದು ಅಧಿಕಾರ ಪತ್ರವನ್ನು ರಚಿಸಿ, ಮೂರನೇ ಆರೋಪಿ ಜುನೈದ್ ಮೆಲ್ಕಾರ್ ಅಬ್ಬಾಸ್ ಅವರಿಗೆ ವಾಹನವನ್ನು ಹಸ್ತಾಂತರಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮುಂದುವರೆದು, 2024ರ ಡಿಸೆಂಬರ್ 16ರಂದು ಬ್ಯಾಂಕ್ ಅಧಿಕಾರಿಯ ಪೋರ್ಜರಿ ಸಹಿ ಹಾಗೂ ನಕಲಿ ಪತ್ರಗಳನ್ನು ಸಿದ್ಧಪಡಿಸಿ, ಸಾಲ ಸಂಪೂರ್ಣ ಪಾವತಿಯಾಗಿರುವಂತೆ ತೋರಿಸಿ ಬಂಟ್ವಾಳ ಆರ್‌ಟಿಒ ಕಚೇರಿಯಲ್ಲಿ ಋಣಭಾರ ತೆಗೆಯಿಸಿ, ಪೂರ್ವನಿಯೋಜಿತ ಷಡ್ಯಂತ್ರದ ಮೂಲಕ ನಾಲ್ಕನೇ ಆರೋಪಿ ರಮೀಝ್ ಅಲಿಶ್ ಎಂಬವರ ಹೆಸರಿಗೆ ವಾಹನವನ್ನು ವರ್ಗಾವಣೆ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಕಲಂ 336(2), 336(3), 340(2), 341(4), 318(2), 318(3) ಮತ್ತು 3(5) ರಡಬ್ಲ್ಯು ಅಡಿ ಪ್ರಕರಣ ದಾಖಲಿಸಿಕೊಂಡಿರುವ ಬಂಟ್ವಾಳ ನಗರ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.