
ಡೈಲಿ ವಾರ್ತೆ:JAN/24/2026
ಅಧಿಕಾರ ದುರುಪಯೋಗಕ್ಕೆ ಕಠಿಣ ಶಿಕ್ಷೆ: ಬೇಳೂರು ಗ್ರಾಮ ಪಂಚಾಯತ್ ಸದಸ್ಯ ಬಿ.ಕರುಣಾಕರ ಶೆಟ್ಟಿ ಸದಸ್ಯತ್ವ ರದ್ದು – 6 ವರ್ಷ ಚುನಾವಣೆಗೆ ಅನರ್ಹ
- ಸಹೋದರಿಯ ವಾಣಿಜ್ಯ ಕಟ್ಟಡಕ್ಕೆ ನಿಯಮಬಾಹಿರ ನಿರಾಕ್ಷೇಪಣಾ ಪತ್ರ ನೀಡಿದ ಆರೋಪ ಸಾಬೀತು | ಲೋಕಾಯುಕ್ತ ತನಿಖೆ ಬಳಿಕ ರಾಜ್ಯ ಸರ್ಕಾರ ಆದೇಶ
ಕೋಟ: ಕುಂದಾಪುರ ತಾಲೂಕು ಬೇಳೂರು ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ಸದಸ್ಯರಾಗಿದ್ದ ಬಿ.ಕರುಣಾಕರ ಶೆಟ್ಟಿ ಅವರು ತಮ್ಮ ಅಧಿಕಾರಾವಧಿಯಲ್ಲಿ ಗಂಭೀರ ಅಧಿಕಾರ ದುರುಪಯೋಗ ಎಸಗಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಅವರ ಗ್ರಾಮ ಪಂಚಾಯತ್ ಸದಸ್ಯತ್ವವನ್ನು ರದ್ದುಪಡಿಸಿ, ಮುಂದಿನ ಆರು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ಕರ್ನಾಟಕ ಸರ್ಕಾರ ಆದೇಶಿಸಿದೆ.
ಬಿ.ಕರುಣಾಕರ ಶೆಟ್ಟಿ ಅವರು ತಮ್ಮ ಸಹೋದರಿಯಾದ ಅಕ್ಕಯ್ಯ ಅಲಿಯಾಸ್ ಅನಿತಾ ಕೆ. ಶೆಟ್ಟಿ ಅವರಿಗೆ ಪಿಡಬ್ಲ್ಯೂಡಿ ರಸ್ತೆ ಮಾರ್ಜಿನ್ ಒಳಗೆ ಇರುವ ವಾಣಿಜ್ಯ ಉದ್ದೇಶದ ಕಟ್ಟಡ ನಿರ್ಮಾಣಕ್ಕೆ ನಿಯಮಬಾಹಿರವಾಗಿ ನಿರಾಕ್ಷೇಪಣಾ ಪತ್ರ ನೀಡಿರುವುದು ತನಿಖೆಯಲ್ಲಿ ದೃಢಪಟ್ಟಿದೆ.
ಈ ಸಂಬಂಧ ಬೇಳೂರು ಗ್ರಾಮದ ಮಧುಕರ ಶೆಟ್ಟಿ ಅವರು, ತಮ್ಮ ಪರ ನ್ಯಾಯವಾದಿ ಬಿ.ಅವಿನಾಶ್ ಶೆಟ್ಟಿ ಅವರ ಕಾನೂನು ಸಲಹೆ ಮೇರೆಗೆ, 2017ರಲ್ಲಿ ಕರ್ನಾಟಕ ಲೋಕಾಯುಕ್ತಕ್ಕೆ (ಎಂ.ವೈ.ಎಸ್. 9466/2017) ದೂರು ಸಲ್ಲಿಸಿದ್ದರು. ದೂರಿನ ಆಧಾರದಲ್ಲಿ ಲೋಕಾಯುಕ್ತರು ಪಂಚಾಯತ್ ರಾಜ್ ಅಧಿನಿಯಮದ ಅಡಿಯಲ್ಲಿ ವಿಚಾರಣೆ ನಡೆಸುವಂತೆ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರಿಗೆ ವಹಿಸಿದ್ದರು.
ಪ್ರಾದೇಶಿಕ ಆಯುಕ್ತರು ನಡೆಸಿದ ಸವಿಸ್ತಾರ ವಿಚಾರಣೆಯಲ್ಲಿ ಬಿ.ಕರುಣಾಕರ ಶೆಟ್ಟಿ ಅವರು ಅಧಿಕಾರ ದುರುಪಯೋಗ ಮಾಡಿಕೊಂಡಿರುವುದು ಸ್ಪಷ್ಟವಾಗಿ ಸಾಬೀತಾಗಿದ್ದು, ಅದರ ವಿಚಾರಣಾ ವರದಿ ಹಾಗೂ ದಾಖಲೆಗಳನ್ನು ಕರ್ನಾಟಕ ಸರ್ಕಾರದ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಸಲ್ಲಿಸಲಾಗಿತ್ತು.
ಈ ವರದಿಯನ್ನು ಆಧರಿಸಿ, ಕರ್ನಾಟಕ ಸರ್ಕಾರವು ಆರ್‌ಡಿಪಿಆರ್ 449 ಜಿಪಿಎ ಜಿಪಿಎ 2025 ಆದೇಶ ಸಂಖ್ಯೆ, ದಿನಾಂಕ 05-01-2026 ರಂತೆ, ಬಿ.ಕರುಣಾಕರ ಶೆಟ್ಟಿ ಅವರನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ಸದಸ್ಯ ಸ್ಥಾನದಿಂದ ತೆಗೆದು ಹಾಕಿ, ಮುಂದಿನ ಆರು ವರ್ಷಗಳ ಕಾಲ ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸದಂತೆ ಅನರ್ಹಗೊಳಿಸಿ ಅಂತಿಮ ಆದೇಶ ಹೊರಡಿಸಿದೆ.
2017–18ನೇ ಸಾಲಿನಲ್ಲಿ ಸಹೋದರಿ ಅನಿತಾ ಶೆಟ್ಟಿ ಅವರ ರಸ್ತೆ ಮಾರ್ಜಿನ್‌ನಲ್ಲಿದ್ದ ವಾಣಿಜ್ಯ ಕಟ್ಟಡವನ್ನು ತೆರವುಗೊಳಿಸುವಂತೆ ಕುಂದಾಪುರ ತಾಲೂಕು ಪಂಚಾಯತ್ ನ್ಯಾಯಾಲಯ ಆದೇಶಿಸಿತ್ತು. ಈ ಪ್ರಕರಣದಲ್ಲೂ ನ್ಯಾಯವಾದಿ ಬಿ.ಅವಿನಾಶ್ ಶೆಟ್ಟಿ ಅವರು ವಾದ ಮಂಡಿಸಿದ್ದು, ಇದೇ ದಾಖಲೆಗಳು ಇತ್ತೀಚಿನ ಸದಸ್ಯತ್ವ ರದ್ದು ಆದೇಶಕ್ಕೆ ಪ್ರಮುಖ ಆಧಾರವಾಗಿವೆ.
ಈ ಪ್ರಕರಣವು ಸ್ಥಳೀಯ ಆಡಳಿತದಲ್ಲಿ ಅಧಿಕಾರ ದುರುಪಯೋಗದ ವಿರುದ್ಧ ಸರ್ಕಾರ ಕೈಗೊಂಡಿರುವ ಕಠಿಣ ಕ್ರಮಕ್ಕೆ ಉದಾಹರಣೆಯಾಗಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.