ಡೈಲಿ ವಾರ್ತೆ:JAN/25/2026

ಆನ್‌ಲೈನ್ ಬೆಟ್ಟಿಂಗ್ ಹೆಸರಿನಲ್ಲಿ ₹15 ಲಕ್ಷ ವಂಚನೆ: ಕೋಟ ಠಾಣೆಯಲ್ಲಿ ಪ್ರಕರಣ ದಾಖಲು

ಕೋಟ : ಆನ್‌ಲೈನ್ ಬೆಟ್ಟಿಂಗ್ ಮೂಲಕ ಹೆಚ್ಚಿನ ಲಾಭದ ಆಸೆ ತೋರಿಸಿ ₹15 ಲಕ್ಷ ವಂಚನೆ ಮಾಡಿದ ಪ್ರಕರಣವೊಂದು ಕೋಟ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ದೂರುದಾರ ಸಂದೇಶ್ ಕುಲಾಲ್ ಬಿಲ್ಲಾಡಿ, ಬ್ರಹ್ಮಾವರ ನಿವಾಸಿ ಇವರು ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದು, ಸುಮಾರು ಒಂದು ವರ್ಷದ ಹಿಂದೆ ಶಿರಿಯಾರ ನಿವಾಸಿ ಪ್ರದೀಪ್ ಎಂಬ ವ್ಯಕ್ತಿಯ ಪರಿಚಯವಾಗಿತ್ತು.

ಪ್ರದೀಪ್ “ಪಾರ್ಕರ್” (Parker) ಎಂಬ ಅಪ್ಲಿಕೇಶನ್ ಮೂಲಕ ಆನ್‌ಲೈನ್ ಬೆಟ್ಟಿಂಗ್ ನಡೆಸುತ್ತಿದ್ದು, ಹೆಚ್ಚಿನ ಲಾಭ ಸಾಧ್ಯವೆಂದು ಸಂದೇಶ್ ಕುಲಾಲ್ ಬಿಲ್ಲಾಡಿಯನ್ನು ಪ್ರಚೋದಿಸಿದ್ದಾನೆ ಎನ್ನಲಾಗಿದೆ.

ಪ್ರದೀಪ್ ಪರಿಚಯಮಾಡಿಕೊಟ್ಟ ಅವನ ತಂಡದವರಾದ ರೂಪೇಶ್, ಮನೋಜ್, ಧೀರಜ್ ಸೇರಿದಂತೆ ಇತರರು ವಾಟ್ಸಪ್ ಮೂಲಕ ಕಳುಹಿಸುತ್ತಿದ್ದ ಅಪ್ಲಿಕೇಶನ್ ಲಿಂಕ್, ಐಡಿ ಹಾಗೂ ಪಾಸ್‌ವರ್ಡ್ ಬಳಸಿ ಸಂದೇಶ್ ಕುಲಾಲ್ ಬೆಟ್ಟಿಂಗ್‌ನಲ್ಲಿ ಭಾಗವಹಿಸಿದ್ದರು.

ಬೆಟ್ಟಿಂಗ್‌ಗೆ ಸಂಬಂಧಿಸಿದ ಹಣವನ್ನು ಪ್ರದೀಪ್ ಸೂಚನೆಯಂತೆ ರೂಪೇಶ್, ಮನೋಜ್, ಧೀರಜ್, ಹರೀಶ, ವಿದೇಶ್ ಸೇರಿದಂತೆ ಇತರರ ಮೊಬೈಲ್ ಸಂಖ್ಯೆಗಳ ಮೂಲಕ ಫೋನ್‌ಪೇ ಹಾಗೂ ಗೂಗಲ್‌ಪೇ ಮೂಲಕ ವರ್ಗಾವಣೆ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಬೆಟ್ಟಿಂಗ್‌ನಲ್ಲಿ ದೂರುದಾರ ಸಂದೇಶ್ ಕುಲಾಲ್ ಸುಮಾರು ₹15 ಲಕ್ಷ ಹಣವನ್ನು ಗೆದ್ದಿದ್ದು, ಸದರಿ ಮೊತ್ತವನ್ನು ವಾಪಸ್ಸು ನೀಡದೆ ಆರೋಪಿತರು ಮೋಸ ಮಾಡಿದ್ದಾರೆ ಎನ್ನಲಾಗಿದೆ. ಸುಮಾರು ಒಂದು ತಿಂಗಳ ಹಿಂದೆ ಶಿರಿಯಾರದಲ್ಲಿ ಪ್ರದೀಪ್ ಅವರನ್ನು ಭೇಟಿ ಮಾಡಿ ಗೆದ್ದ ಹಣವನ್ನು ನೀಡುವಂತೆ ಕೇಳಿದಾಗ, ಪ್ರದೀಪ್ ಹಾಗೂ ಅವನ ತಂಡ ಹಣ ನೀಡಲು ನಿರಾಕರಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂಬ ಆರೋಪವೂ ಇದೆ.

ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 11/2026 ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆ ಕಲಂ 318(2), 316(2), 112, 351(2), 3(5) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಕಲಂ 66(D) ಮತ್ತು 78ರಂತೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.