


ಡೈಲಿ ವಾರ್ತೆ:JAN/25/2026

ಬಾಂಗ್ಲಾದೇಶದಲ್ಲಿ ಹಿಂದೂ ಯುವಕನ ಸಜೀವ ದಹನ: ಅಲ್ಪಸಂಖ್ಯಾತರ ಮೇಲೆ ಮತ್ತೊಂದು ಅಮಾನವೀಯ ದಾಳಿ

ಢಾಕಾ: ಬಾಂಗ್ಲಾದೇಶದಲ್ಲಿ ಹಿಂದೂ ಸಮುದಾಯದ ಮೇಲಿನ ದಾಳಿಗಳು ಆತಂಕಕಾರಿ ರೀತಿಯಲ್ಲಿ ಮುಂದುವರಿದಿದ್ದು, ನರಸಿಂಗ್ಡಿ ಜಿಲ್ಲೆಯಲ್ಲಿ 23 ವರ್ಷದ ಹಿಂದೂ ಯುವಕನನ್ನು ಗ್ಯಾರೇಜ್ ಒಳಗೇ ಸಜೀವವಾಗಿ ಸುಟ್ಟುಹಾಕಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.
ಈ ಕೃತ್ಯ ಪೂರ್ವನಿಯೋಜಿತ ಹತ್ಯೆ ಎಂದು ಮೃತನ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ಸಜೀವ ದಹನವಾದ ವ್ಯಕ್ತಿಯನ್ನು ಚಂಚಲ್ ಚಂದ್ರ ಭೌಮಿಕ್ ಎಂದು ಗುರುತಿಸಲಾಗಿದೆ. ಈ ಘಟನೆ ನರಸಿಂಗ್ಡಿ ಪೊಲೀಸ್ ಠಾಣೆಗೆ ಹೊಂದಿಕೊಂಡಿರುವ ಮಸೀದಿ ಮಾರುಕಟ್ಟೆ ಪ್ರದೇಶದ ಬಳಿ ನಡೆದಿದೆ.
ಚಂಚಲ್ ಮೂಲತಃ ಕುಮಿಲ್ಲಾ ಜಿಲ್ಲೆಯ ಲಕ್ಷ್ಮಿಪುರ ಗ್ರಾಮದ ನಿವಾಸಿಯಾಗಿದ್ದು, ಕೆಲಸದ ನಿಮಿತ್ತ ನರಸಿಂಗ್ಡಿ ಜಿಲ್ಲೆಯಲ್ಲಿ ವಾಸವಿದ್ದ. ಕುಟುಂಬದ ಏಕೈಕ ಜೀವನಾಧಾರವಾಗಿದ್ದ ಚಂಚಲ್ ಅವರ ಸಾವಿನಿಂದ ಕುಟುಂಬ ಶೋಕಸಾಗರದಲ್ಲಿ ಮುಳುಗಿದೆ.
ಪ್ರತ್ಯಕ್ಷದರ್ಶಿಗಳ ಹೇಳಿಕೆಯಂತೆ, ಶುಕ್ರವಾರ ತಡರಾತ್ರಿ ಗ್ಯಾರೇಜ್ ಒಳಗೆ ಮಲಗಿದ್ದ ಚಂಚಲ್ ಮೇಲೆ ಕಿಡಿಗೇಡಿಗಳು ದಾಳಿ ನಡೆಸಿದ್ದಾರೆ. ಗ್ಯಾರೇಜ್‌ನ ಶಟರ್‌ಗೆ ಹೊರಗಿನಿಂದಲೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿದ್ದು, ಕ್ಷಣಾರ್ಧದಲ್ಲಿ ಬೆಂಕಿ ವ್ಯಾಪಿಸಿ ಚಂಚಲ್ ಗ್ಯಾರೇಜ್‌ನೊಳಗೇ ಸಜೀವ ದಹನಗೊಂಡಿದ್ದಾರೆ.
ಘಟನೆ ಬಳಿಕ ದಾಳಿಕೋರರು ಗ್ಯಾರೇಜ್‌ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.
ಬೆಂಕಿ ಕಾಣಿಸಿಕೊಂಡ ಕೆಲವೇ ಕ್ಷಣಗಳಲ್ಲಿ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದರು.
ನರಸಿಂಗ್ಡಿ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಸುಮಾರು ಒಂದು ಗಂಟೆ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು. ಬಳಿಕ ಚಂಚಲ್ ಅವರ ಸುಟ್ಟ ದೇಹವನ್ನು ಹೊರತೆಗೆಯಲಾಯಿತು.
ಈ ಕೃತ್ಯ ಪೂರ್ವನಿಯೋಜಿತ ಹತ್ಯೆಯಾಗಿದ್ದು, ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಮೃತನ ಕುಟುಂಬಸ್ಥರು ಆಗ್ರಹಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಘಟನೆಗೆ ನಿಖರ ಕಾರಣ ಪತ್ತೆಹಚ್ಚಲು ತನಿಖೆ ಕೈಗೆತ್ತಿಕೊಂಡಿದ್ದಾರೆ.