ಡೈಲಿ ವಾರ್ತೆ:JAN/26/2026

ಗುರುಕುಲ ಕಾರ್ನಿವಲ್ (ಮಕ್ಕಳ ಹಬ್ಬ) ಉದ್ಘಾಟನೆ: ಸು ಪ್ರಮ್ ಸೋ. ಖ್ಯಾತಿಯ
‘ರವಿಯಣ್ಣ’ ಶನಿಲ್ ಗೌತಮ್ ಪ್ರೇರಣಾದಾಯಕ ಮಾತು – ವಿದ್ಯಾರ್ಥಿಗಳಿಂದ ಭರ್ಜರಿ ಪ್ರತಿಕ್ರಿಯೆ

ಕುಂದಾಪುರ: ಗುರುಕುಲ ಶಿಕ್ಷಣ ಸಂಸ್ಥೆಯಲ್ಲಿ ಜ. 26 ರಂದು ಸೋಮವಾರ ಆಯೋಜಿಸಲಾದ ಗುರುಕುಲ ಕಾರ್ನಿವಲ್ ಕಾರ್ಯಕ್ರಮವನ್ನು ಕನ್ನಡ ಚಿತ್ರರಂಗದ ಖ್ಯಾತ ನಟ ಶನಿಲ್ ಗೌತಮ್ ಅವರು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು
“ನನ್ನ ಹೆಸರು ಶನಿಲ್ ಗೌತಮ್. ಆದರೆ ಸು.ಪ್ರಮ್.ಸೋ. ಸಿನಿಮಾದಲ್ಲಿನ ‘ರವಿಯಣ್ಣ’ ಪಾತ್ರದಿಂದ ಜನ ನನ್ನನ್ನು ಗುರುತಿಸುತ್ತಿದ್ದಾರೆ. ಸಿನಿಮಾದ ಪಾತ್ರ ಜನಮನ ಗೆದ್ದಾಗ ಕಲಾವಿದನಿಗೆ ಸಿಗುವ ಗೌರವವೇ ಅದೃಷ್ಟ. ಈ ಭಾಗ್ಯ ಎಲ್ಲರಿಗೂ ಸಿಗುವುದಿಲ್ಲ” ಎಂದು ಸಂತಸ ವ್ಯಕ್ತಪಡಿಸಿದರು.

‘ಗುರುಕುಲ’ ಎಂಬ ಶಾಲೆಯ ಹೆಸರೇ ಕೇಳುತ್ತಿದ್ದಂತೆ ಅಪಾರ ಖುಷಿಯಾಗುತ್ತದೆ ಎಂದು ಹೇಳಿದ ಅವರು, ನಾನು ಕೂಡ ಸತ್ಯಸಾಯಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಅನುಭವವನ್ನು ಹಂಚಿಕೊಂಡರು.
“ಅಲ್ಲಿ ಸಿಕ್ಕ ಮೌಲ್ಯಾಧಾರಿತ ಶಿಕ್ಷಣವೇ ನನ್ನ ಜೀವನದ ದಿಕ್ಕನ್ನು ರೂಪಿಸಿದೆ. ಅದೇ ಕಾರಣಕ್ಕೆ ಇಂದು ನಾನು ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಯಿತು” ಎಂದರು.

ವಿದ್ಯಾರ್ಥಿಗಳಿಗೆ ಸಂದೇಶ ನೀಡಿದ ಶನಿಲ್ ಗೌತಮ್,
“ನಿಮಗೆ ಯಾವ ಕ್ಷೇತ್ರದಲ್ಲಿ ಆಸಕ್ತಿ ಇದೆಯೋ ಅದನ್ನು ಆರಿಸಿ. ಅದರಲ್ಲಿ ಭವಿಷ್ಯವಿದೆ. ತಪ್ಪು ದಾರಿಯಲ್ಲಿ ಹೋಗಬೇಡಿ. ಶ್ರದ್ಧೆಯಿಂದ ಓದಿ, ಬುದ್ಧಿವಂತರಾಗಿ ಬೆಳೆದು, ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ” ಎಂದು ಸಲಹೆ ನೀಡಿದರು.

ಪೋಷಕರಿಗೆ ಕಿವಿಮಾತು ಹೇಳಿದ ಅವರು
“ಮಕ್ಕಳನ್ನು ಕೇವಲ ಅಂಕಗಳಿಗಾಗಿ ಯಂತ್ರಗಳಂತೆ ಬೆಳೆಸಬೇಡಿ. ಮಕ್ಕಳ ಆಸಕ್ತಿಯನ್ನು ಅರಿತು, ಅವರ ಮೇಲೆ ಓದು-ಒತ್ತಡ ಹೇರದೆ, ಅವರಿಗೆ ಇಷ್ಟವಾದ ಕ್ಷೇತ್ರವನ್ನು ಆಯ್ಕೆಮಾಡಲು ಅವಕಾಶ ನೀಡಿ” ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಂಸ್ಥೆ ವತಿಯಿಂದ ಶನಿಲ್ ಗೌತಮ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದ ಅಂತ್ಯದಲ್ಲಿ ಸು.ಪ್ರಮ್.ಸೋ. ಸಿನಿಮಾದ ಜನಪ್ರಿಯ ಡೈಲಾಗ್‌ಗಳಿಗೆ ಗುರುಕುಲ ವಿದ್ಯಾರ್ಥಿಗಳು ಫಿದಾ ಆಗಿ ಸಂಭ್ರಮಿಸಿದರು. ಬಳಿಕ ನಟ ಶನಿಲ್ ಗೌತಮ್ ಅವರು ವಿದ್ಯಾರ್ಥಿಗಳು ಹಾಗೂ ಶಿಕ್ಷಕಿಯರೊಂದಿಗೆ ಕುಣಿದು ಕುಪ್ಪಳಿಸಿ ಕಾರ್ಯಕ್ರಮಕ್ಕೆ ಮತ್ತಷ್ಟು ರಂಗು ತುಂಬಿದರು. ಗುರುಕುಲ ಕಾರ್ನಿವಲ್ ವಿದ್ಯಾರ್ಥಿಗಳಿಗೆ ಕಲಿಕೆ, ಮನರಂಜನೆ ಮತ್ತು ಪ್ರೇರಣೆಯ ಅದ್ಭುತ ಸಂಯೋಜನೆಯಾಗಿ ಮೂಡಿಬಂದಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಂಡ್ಯ ಎಜುಕೇಶನಲ್ ಟ್ರಸ್ಟ್‌ನ ಜಂಟಿ ಕಾರ್ಯನಿರ್ವಾಹಕಿ ಶ್ರೀಮತಿ ಅನುಪಮಾ ಎಸ್ ಶೆಟ್ಟಿ ವಹಿಸಿದರು.

ಈ ಸಂದರ್ಭದಲ್ಲಿ ಬಾಂಡ್ಯ ಎಜುಕೇಶನಲ್ ಟ್ರಸ್ಟ್, ವಕ್ವಾಡಿ ಇದರ ಜಂಟಿ ಕಾರ್ಯನಿರ್ವಾಹಕರಾದ ಸುಭಾಶ್ಚಂದ್ರ ಶೆಟ್ಟಿ ಉಪಸ್ಥಿತರಿದ್ದರು.

ಗುರುಕುಲ ಸಂಸ್ಥೆಯ ಪ್ರಾಂಶುಪಾಲೆಯಾದ ಶ್ರೀಮತಿ ಡಾ. ರೂಪಾ ಶೆಣೈ ಸ್ವಾಗತ ಹಾಗೂ ಪ್ರಾಸ್ತವಿಕ ನುಡಿಯನ್ನಾಡಿದರು.

ಕಾರ್ನಿವಲ್ “ಮಕ್ಕಳ ಹಬ್ಬ” ಮಕ್ಕಳ ವಿವಿಧ ಸ್ಟಾಲ್‌ಗಳು, ಸಾಂಸ್ಕೃತಿಕ ಪ್ರದರ್ಶನಗಳು ನಡೆಯಿತು.