ಡೈಲಿ ವಾರ್ತೆ:JAN/26/2026

ಕೋಟ ಹಂದೆ ಮನೆತನದ ಹಿರಿಯ ವೈದ್ಯ ಡಾ. ಎಚ್.ವಿ. ಹಂದೆ ಅವರಿಗೆ 2026ರ ಪ್ರತಿಷ್ಠಿತ ಪದ್ಮಶ್ರೀ ಪುರಸ್ಕಾರ

ಕೋಟ, ಜ. 26: ಕೋಟ ಹಂದಟ್ಟಿನ ಪ್ರಸಿದ್ಧ ಹಂದೆ ಮನೆತನದ ಹಿರಿಯ ವೈದ್ಯರೂ, ರಾಜಕೀಯ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿಯೂ ವಿಶಿಷ್ಟ ಕೊಡುಗೆ ನೀಡಿರುವ ಡಾ. ಎಚ್.ವಿ. ಹಂದೆ (99) ಅವರಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಸಲ್ಲಿಸಿದ ಅನನ್ಯ ಸೇವೆಯನ್ನು ಗುರುತಿಸಿ 2026ರ ಪ್ರತಿಷ್ಠಿತ ಪದ್ಮಶ್ರೀ ಪುರಸ್ಕಾರ ಲಭಿಸಿದೆ.

ವೃತ್ತಿಯಲ್ಲಿ ವಕೀಲರಾಗಿದ್ದು, ಬ್ರಿಟಿಷ್ ಸರ್ಕಾರದಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಕೋಟದ ಮಾದಪ್ಪ ಹಂದೆ ಅವರ ಪುತ್ರರಾದ ಡಾ. ಎಚ್.ವಿ. ಹಂದೆ ಅವರು, ಮಂಗಳೂರು, ಚೆನ್ನೈ ಹಾಗೂ ಕೊಯಮುತ್ತೂರಿನಲ್ಲಿ ಉನ್ನತ ವೈದ್ಯಕೀಯ ವ್ಯಾಸಂಗ ಪೂರ್ಣಗೊಳಿಸಿದ್ದಾರೆ. ನಂತರ ತಮಿಳುನಾಡಿನ ಚೆನ್ನೈಯಲ್ಲಿ ಹಂದೆ ಆಸ್ಪತ್ರೆ ಸ್ಥಾಪಿಸಿ, ದಶಕಗಳ ಕಾಲ ಜನಸೇವೆಗೆ ತಮ್ಮ ಜೀವನ ಅರ್ಪಿಸಿದ್ದಾರೆ.

ತಮಿಳುನಾಡಿನಲ್ಲಿ ದಿವಂಗತ ಎಂ.ಜಿ. ರಾಮಚಂದ್ರನ್ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಡಾ. ಹಂದೆ ಅವರು ಆರೋಗ್ಯ ಸಚಿವರಾಗಿ ಸೇವೆ ಸಲ್ಲಿಸಿ, ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಬಲಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಮುಖ್ಯಮಂತ್ರಿ ಎಂಜಿಆರ್ ಅವರ ಅನಾರೋಗ್ಯದ ಸಂದರ್ಭದಲ್ಲಿ ಆಡಳಿತ ನಿರ್ವಹಣೆಯಲ್ಲಿ ಪ್ರಮುಖ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ, ತಮ್ಮ ರಾಜಕೀಯ ಕುಶಲತೆಯನ್ನು ಪ್ರದರ್ಶಿಸಿದ್ದರು.

ವೈದ್ಯಕೀಯ ಹಾಗೂ ರಾಜಕೀಯದ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿಯೂ ಡಾ. ಹಂದೆ ಅವರು ತಮ್ಮದೇ ಛಾಪು ಮೂಡಿಸಿದ್ದು, ಕಂಬ ರಾಮಾಯಣವನ್ನು ಇಂಗ್ಲಿಷ್ ಮತ್ತು ತಮಿಳು ಭಾಷೆಗಳಿಗೆ ಭಾಷಾಂತರಿಸಿ ಸಾಹಿತ್ಯ ವಲಯದಲ್ಲಿಯೂ ಗೌರವ ಪಡೆದಿದ್ದಾರೆ.

ಈ ಸಂದರ್ಭದಲ್ಲಿ ಸಾಲಿಗ್ರಾಮ ಮಕ್ಕಳ ಮೇಳದ ಸ್ಥಾಪಕ ಎಚ್. ಶ್ರೀಧರ ಹಂದೆ ಅವರು ಪ್ರತಿಕ್ರಿಯಿಸಿ, ಕೋಟದ ಹಂದೆ ಮನೆತನದಲ್ಲಿ ಕಲೆ, ಸಾಹಿತ್ಯ, ಸಾಂಸ್ಕೃತಿಕ, ರಾಜಕೀಯ, ಸಾಮಾಜಿಕ ಹಾಗೂ ಕೃಷಿ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರು ಅನೇಕರು. ನಮ್ಮ ಹಿರಿಯ ಸಹೋದರರಾದ ಡಾ. ಎಚ್.ವಿ. ಹಂದೆ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿರುವುದು ಕುಟುಂಬಕ್ಕೂ, ಊರಿಗೂ ಅಪಾರ ಹೆಮ್ಮೆಯ ಸಂಗತಿ. ಇದು ಪ್ರತಿಭೆಗೆ ಸಂದ ನಿಜವಾದ ಗೌರವ ಎಂದು ಸಂತಸ ವ್ಯಕ್ತಪಡಿಸಿದರು.

ಡಾ. ಎಚ್.ವಿ. ಹಂದೆ ಅವರಿಗೆ ಲಭಿಸಿದ ಪದ್ಮಶ್ರೀ ಪುರಸ್ಕಾರವು ಕೋಟ ಪ್ರದೇಶಕ್ಕೂ, ಹಂದೆ ಮನೆತನಕ್ಕೂ ಗೌರವ ಹೆಚ್ಚಿಸುವ ಸಾಧನೆಯಾಗಿ ಪರಿಣಮಿಸಿದೆ.