ಡೈಲಿ ವಾರ್ತೆ:JAN/26/2026

ಕೋಡಿಬೇಂಗ್ರೆ ಡೆಲ್ಟಾ ಬೀಚ್ ದುರಂತ: ಪ್ರವಾಸಿ ದೋಣಿ ಮುಳುಗಡೆ – ಇಬ್ಬರು ಮೃತ್ಯು, ಓರ್ವ ಗಂಭೀರ

ಉಡುಪಿ : ಕೋಡಿಬೇಂಗ್ರೆಯ ಡೆಲ್ಟಾ ಬೀಚ್ ಬಳಿ ಸೋಮವಾರ ಬೆಳಿಗ್ಗೆ ಸಂಭವಿಸಿದ ಭೀಕರ ಪ್ರವಾಸಿ ದೋಣಿ ದುರಂತದಲ್ಲಿ ಇಬ್ಬರು ಪ್ರವಾಸಿಗರು ಮೃತಪಟ್ಟಿದ್ದು, ಓರ್ವರ ಸ್ಥಿತಿ ಗಂಭೀರವಾಗಿರುವ ಘಟನೆ ವರದಿಯಾಗಿದೆ.

ಮೈಸೂರು ಮೂಲದ ಶಂಕರಪ್ಪ (22) ಹಾಗೂ ಸಿಂಧು (23) ಎಂಬವರು ಮೃತ ದುರ್ದೈವಿಗಳಾಗಿದ್ದಾರೆ.

ದಿಶಾ (26) ಎಂಬ ಯುವತಿ ಗಂಭೀರವಾಗಿ ಅಸ್ವಸ್ಥಗೊಂಡು ಚಿಕಿತ್ಸೆ ಪಡೆಯುತ್ತಿದ್ದು, ಧರ್ಮರಾಜ್ (26) ಎಂಬವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.

ರೆಸಾರ್ಟ್‌ವೊಂದರಲ್ಲಿ ತಂಗಿದ್ದ 14 ಮಂದಿ ಪ್ರವಾಸಿಗರನ್ನು ವಿಹಾರಕ್ಕಾಗಿ ದೋಣಿಯಲ್ಲಿ ಸಮುದ್ರಕ್ಕೆ ಕರೆದುಕೊಂಡು ಹೋಗಲಾಗಿತ್ತು. ಈ ವೇಳೆ ಕೆಲವರು ಲೈಫ್ ಜಾಕೆಟ್ ಧರಿಸಿರಲಿಲ್ಲ ಎನ್ನಲಾಗಿದೆ. ಸಮುದ್ರ ಮಧ್ಯೆ ದೋಣಿ ಅಕಸ್ಮಿಕವಾಗಿ ಮುಳುಗಡೆಯಾಗಿ, ದೋಣಿಯಲ್ಲಿದ್ದ ಎಲ್ಲರೂ ನೀರಿಗೆ ಬಿದ್ದಿದ್ದಾರೆ.
ಸ್ಥಳೀಯರು ಹಾಗೂ ರಕ್ಷಣಾ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾಗಿ ಹಲವು ಪ್ರವಾಸಿಗರನ್ನು ರಕ್ಷಿಸಿದ್ದಾರೆ. ಆದರೆ, ನೀರು ನುಂಗಿದ ಪರಿಣಾಮ ನಾಲ್ವರು ತೀವ್ರವಾಗಿ ಅಸ್ವಸ್ಥಗೊಂಡಿದ್ದು, ಅವರಲ್ಲಿ ಇಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಘಟನೆ ಕುರಿತು ಮಾತನಾಡಿದ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್, “ದುರಂತಕ್ಕೆ ಕಾರಣಗಳ ಬಗ್ಗೆ ತನಿಖೆ ನಡೆಯುತ್ತಿದೆ. ಲೈಫ್ ಜಾಕೆಟ್ ಬಳಕೆಯ ಕುರಿತು ಗಂಭೀರ ನಿರ್ಲಕ್ಷ್ಯ ಕಂಡುಬಂದಿದೆ” ಎಂದು ತಿಳಿಸಿದ್ದಾರೆ.

ಘಟನೆಯಿಂದ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಪ್ರವಾಸಿ ಚಟುವಟಿಕೆಗಳ ಸುರಕ್ಷತೆ ಕುರಿತು ಮತ್ತೊಮ್ಮೆ ಪ್ರಶ್ನೆ ಎತ್ತಲಾಗಿದೆ.