ಡೈಲಿ ವಾರ್ತೆ:JAN/27/2026

ನಗರಸಭೆ ಪೌರಾಯುಕ್ತೆಗೆ ಧಮ್ಕಿ ಪ್ರಕರಣ: ಕಾಂಗ್ರೆಸ್ ಮುಖಂಡ ರಾಜೀವ್ ಗೌಡಗೆ ತಲೆಮರೆಸಿಕೊಳ್ಳಲು ಸಹಾಯ – ಮಂಗಳೂರು ಮೂಲದ ಉದ್ಯಮಿ ಬಂಧನ

ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಗೌಡ ಅವರಿಗೆ ಧಮ್ಕಿ ಹಾಕಿದ್ದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅವರಿಗೆ ತಲೆಮರೆಸಿಕೊಳ್ಳಲು ಸಹಕರಿಸಿದ್ದ ಆರೋಪಿಯನ್ನು ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಯನ್ನು ಮಂಗಳೂರಿನ ಮೈಕಲ್ ಜೋಸೇಫ್ ರೆಗೋ ಎಂದು ಗುರುತಿಸಲಾಗಿದೆ.

ಈತನಿಗೆ ಸೇರಿದ್ದ ಪಚ್ಚನಾಡಿ ಸಮೀಪದ ಜೆ.ಕೆ ಫಾರ್ಮ್ ಹೌಸ್‌ನಲ್ಲಿ ರಾಜೀವ್ ಗೌಡ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ.

ಈ ಬಗ್ಗೆ ಖಚಿತ ಮಾಹಿತಿ ದೊರಕುತ್ತಿದ್ದಂತೆ ಚಿಕ್ಕಬಳ್ಳಾಪುರ ಪೊಲೀಸರು ತಂಡವನ್ನು ಮಂಗಳೂರಿಗೆ ರವಾನಿಸಿದ್ದರು.
ಪೊಲೀಸರು ಮಂಗಳೂರು ತಲುಪುತ್ತಿರುವ ಮಾಹಿತಿ ಅರಿತ ರಾಜೀವ್ ಗೌಡ, ತನ್ನ ಕಾರನ್ನು ಮಂಗಳೂರು ಜಂಕ್ಷನ್ ರೈಲ್ವೇ ನಿಲ್ದಾಣದ ಬಳಿ ಬಿಟ್ಟು, ಮೈಕಲ್ ಜೋಸೇಫ್ ರೆಗೋ ಅವರ ಕಾರಿನಲ್ಲಿ ಕೇರಳಕ್ಕೆ ಪರಾರಿಯಾಗಿದ್ದ ಎಂದು ತಿಳಿದು ಬಂದಿದೆ.

ಆದರೆ ಆರೋಪಿಗಳು ತಪ್ಪಿಸಿಕೊಳ್ಳುವ ಪ್ರಯತ್ನ ವಿಫಲವಾಗಿದ್ದು, ಚಿಕ್ಕಬಳ್ಳಾಪುರ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರನ್ನೂ ಕೇರಳದಲ್ಲಿ ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದ ಇನ್ನಷ್ಟು ವಿವರಗಳನ್ನು ಪೊಲೀಸರು ಸಂಗ್ರಹಿಸುತ್ತಿದ್ದಾರೆ.

ನಗರಸಭೆ ಅಧಿಕಾರಿಗೆ ಧಮ್ಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ