
ಡೈಲಿ ವಾರ್ತೆ:JAN/27/2026
ಕೋಡಿಬೇಂಗ್ರೆ ಡೆಲ್ಟಾ ಬೀಚ್ ದೋಣಿ ದುರಂತ: ಮತ್ತೋರ್ವ ಯುವತಿ ಸಾವು, ಮೃತರ ಸಂಖ್ಯೆ ಮೂರಕ್ಕೆ ಏರಿಕೆ

ಉಡುಪಿ: ಕೋಡಿಬೇಂಗ್ರೆಯ ಡೆಲ್ಟಾ ಬೀಚ್ ಬಳಿ ಸೋಮವಾರ ಬೆಳಿಗ್ಗೆ ಸಂಭವಿಸಿದ ಪ್ರವಾಸಿ ದೋಣಿ ದುರಂತದಲ್ಲಿ ಮತ್ತೋರ್ವ ಯುವತಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದು, ಘಟನೆಯಲ್ಲಿ ಮೃತರ ಸಂಖ್ಯೆ ಮೂರಕ್ಕೆ ಏರಿದೆ.
ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೈಸೂರಿನ ದಿಶಾ (26) ಅವರು ಕೊನೆಯುಸಿರೆಳೆದಿದ್ದಾರೆ. ಇದೇ ಘಟನೆಗೆ ಸಂಬಂಧಿಸಿದಂತೆ ಶಂಕರಪ್ಪ (22) ಹಾಗೂ ಸಿಂಧು (23) ಅವರು ಸೋಮವಾರವೇ ಮೃತಪಟ್ಟಿದ್ದರು.
ಘಟನೆಯ ವಿವರದಂತೆ, ರೆಸಾರ್ಟ್ ಒಂದರಲ್ಲಿ ಉಳಿದುಕೊಂಡಿದ್ದ 14 ಮಂದಿ ಪ್ರವಾಸಿಗರನ್ನು ವಿಹಾರಕ್ಕೆಂದು ದೋಣಿಯಲ್ಲಿ ಸಮುದ್ರಕ್ಕೆ ಕರೆದುಕೊಂಡು ಹೋಗಲಾಗಿತ್ತು. ಈ ವೇಳೆ ಕೆಲ ಪ್ರವಾಸಿಗರು ಲೈಫ್ ಜಾಕೆಟ್ ಧರಿಸಿರಲಿಲ್ಲ ಎನ್ನಲಾಗಿದೆ. ಸಮುದ್ರ ಮಧ್ಯಭಾಗದಲ್ಲಿ ದೋಣಿ ಅಕಸ್ಮಿಕವಾಗಿ ಮುಳುಗಿದ ಪರಿಣಾಮ ದೋಣಿಯಲ್ಲಿದ್ದ ಎಲ್ಲರೂ ನೀರಿಗೆ ಬಿದ್ದಿದ್ದಾರೆ.
ಸ್ಥಳೀಯರು ಹಾಗೂ ರಕ್ಷಣಾ ಸಿಬ್ಬಂದಿ ತಕ್ಷಣ ಕಾರ್ಯಾಚರಣೆ ನಡೆಸಿ ಹಲವರನ್ನು ರಕ್ಷಿಸಿದ್ದಾರೆ. ಆದರೆ, ನಾಲ್ವರು ಪ್ರವಾಸಿಗರು ತೀವ್ರ ಅಸ್ವಸ್ಥಗೊಂಡಿದ್ದು, ಅವರಲ್ಲಿ ಇಬ್ಬರು ಸೋಮವಾರ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು. ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದ್ದ ದಿಶಾ ಅವರು ಮಂಗಳವಾರ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ದೋಣಿ ಸುರಕ್ಷತಾ ನಿಯಮಗಳ ಉಲ್ಲಂಘನೆ ನಡೆದಿದೆಯೇ ಎಂಬ ಕುರಿತು ತನಿಖೆ ಮುಂದುವರಿದಿದೆ.