
ಡೈಲಿ ವಾರ್ತೆ:JAN/27/2026
ಪುತ್ತೂರಿನಲ್ಲಿ 33ನೇ ವರ್ಷದ ಹೊನಲು ಬೆಳಕಿನ ಕೋಟಿ ಚೆನ್ನಯ ಕಂಬಳ:
ಕೃಷಿ–ಸಾಹಿತ್ಯ ಸಾಧಕ ಕುಮಾರ್ ಪೆರ್ನಾಜೆಗೆ ಭವ್ಯ ಸನ್ಮಾನ

ಪುತ್ತೂರು: ಸಾಂಸ್ಕೃತಿಕ ಶ್ರೀಮಂತಿಕೆಯ ಕರಾವಳಿಯ ಪರಂಪರೆಯ ಕ್ರೀಡೆ 33ನೇ ವರ್ಷದ ಹೊನಲು ಬೆಳಕಿನ ಕೋಟಿ ಚೆನ್ನಯ ಜೋಡುಕರೆ ಕಂಬಳವು ಜ.24 ರಂದು ಪುತ್ತೂರು ಶ್ರೀ ಮಾಲಿಂಗೇಶ್ವರ ದೇವರ ದೇವಮಾರು ಗದ್ದೆಯಲ್ಲಿ ವೈಭವದಿಂದ ನಡೆಯಿತು.
ಈ ಸಂದರ್ಭದಲ್ಲಿ ಜೇನು ಕೃಷಿ, ಪರಿಸರ ಸಂರಕ್ಷಣೆ, ಕೃಷಿ ಸಾಹಿತ್ಯ, ಸಂಶೋಧನಾ ಬರಹಗಳು ಹಾಗೂ ಗ್ರಾಮೀಣ ಪತ್ರಿಕೋದ್ಯಮದ ಮೂಲಕ ಸಲ್ಲಿಸಿದ ವಿಶಿಷ್ಟ ಸೇವೆಗಾಗಿ ಕೃಷಿ–ಸಾಹಿತ್ಯ ಸಾಧಕ ಹಾಗೂ ಕಲಾ ಪ್ರೋತ್ಸಾಹಕರಾದ ಕುಮಾರ್ ಪೆರ್ನಾಜೆ ಅವರಿಗೆ ಸಮಾರಂಭದ ಅಧ್ಯಕ್ಷರೂ ಆದ ಶಾಸಕರಾದ ಅಶೋಕ್ ಕುಮಾರ್ ರೈ ಅವರು ಶಾಲು–ಪೇಟ ಹೊದಿಸಿ ಸನ್ಮಾನ ಪತ್ರ ನೀಡಿ ಗೌರವಿಸಿದರು.
ಕಂಬಳ ಸಮಿತಿಯ ಗೌರವಾಧ್ಯಕ್ಷ ವಿನಯ್ ಕುಮಾರ್ ಸೊರಕೆ ಅವರು ಹಣ್ಣು–ಹಂಪಲು ನೀಡಿ ಅಭಿನಂದಿಸಿದರು.
ಕಂಬಳ ಸಮಿತಿಯ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರಧಾನ ಕಾರ್ಯದರ್ಶಿ ದಿನೇಶ್ ಕುಲಾಲ್ ಪಿವಿ ಸನ್ಮಾನ ಪತ್ರವಾಚಿಸಿದರು. ವೇದಿಕೆಯಲ್ಲಿ ಮಾಜಿ ಶಾಸಕಿ ಶಕುಂತಲಾ ಟಿ. ಶೆಟ್ಟಿ, ಪಂಜಿಗುಡ್ಡೆ ಈಶ್ವರ ಭಟ್, ಗುಣಪಾಲ ಕಡಂಬ, ನವೀನ್ ಕುಮಾರ್ ಭಂಡಾರಿ, ಮೌರಿಸ್ ಮಸ್ಕರೆನಸ್, ಎಂ.ಎಸ್. ಮಹಮದ್, ಸರಿತ, ಪ್ರಕೃತಿ, ಮಹಮ್ಮದ್ ಅಲಿ, ಮಲ್ಲಿಕಾ ಪಕ್ಕಳ, ಹಿರಿಯ ಚಲನಚಿತ್ರ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ನಿರೂಪಣೆಯನ್ನು ವಸಂತಕುಮಾರ್ ರೈ ದುಗ್ಗಳ ಹಾಗೂ ನಿರಂಜನ ರೈ ಮಠಂತಬೆಟ್ಟು ನೆರವೇರಿಸಿದರು.