ಡೈಲಿ ವಾರ್ತೆ:JAN/27/2026

ವಿನಾಯಿತಿ ಪತ್ರವಿದ್ದರೂ 21 ಪ್ಯಾರಾ ಕಮಾಂಡೋಗೆ ಅವಮಾನ: ಸಾಸ್ತಾನ ಟೋಲ್ ಸಿಬ್ಬಂದಿ ವಿರುದ್ಧ ಕಾನೂನು ಕ್ರಮಕ್ಕೆ ಮಾಜಿ ಸೈನಿಕರ ಸಂಘದಿಂದ ದೂರು

ಕೋಟ, ಜ.27: ಟೋಲ್ ವಿನಾಯಿತಿ ಪತ್ರವಿದ್ದರೂ ನಿವೃತ್ತ 21 ಪ್ಯಾರಾ ಕಮಾಂಡೋ ಸೈನಿಕರಿಗೆ ಸಾರ್ವಜನಿಕರ ಎದುರು ನಿಂದಿಸಿ ಅವಮಾನಿಸಿದ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಸಾಸ್ತಾನ ಟೋಲ್ ಪ್ಲಾಜಾದಲ್ಲಿ ನಡೆದಿದ್ದು, ಪ್ರಕರಣದ ಸಂಬಂಧ ಟೋಲ್ ಪ್ಲಾಜಾ ಸಿಬ್ಬಂದಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮಾಜಿ ಸೈನಿಕರ ಸಂಘ ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.

ದಿನಾಂಕ 25-01-2026ರಂದು ರಾತ್ರಿ ಸುಮಾರು 9.30ರ ವೇಳೆಗೆ ಸಾಸ್ತಾನ ಟೋಲ್ ಪ್ಲಾಜಾದಲ್ಲಿ ನಿವೃತ್ತ ಆರ್ಮಿ 21 ಪ್ಯಾರಾ ಕಮಾಂಡೋ ಶ್ಯಾಮರಾಜ್ ಅವರಿಗೆ ನಡೆದ ಅವಮಾನಕಾರಿ ವರದಿಯನ್ನು ಸಾಮಾಜಿಕ ಜಾಲತಾಣದ ಮೂಲಕ ಗಮನಿಸಿದ ಬಳಿಕ ಸಂಘ ಈ ಕ್ರಮಕ್ಕೆ ಮುಂದಾಗಿದೆ.

ಮೂಲತಃ ಕಾಸರಗೋಡು ಜಿಲ್ಲೆಯವರಾದ ಶ್ಯಾಮರಾಜ್ ಅವರು ಆಪರೇಶನ್ ಪರಾಕ್ರಮದ ವೇಳೆ ಉಗ್ರರ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಕಾರ್ಯಾಚರಣೆಯಿಂದ ವಾಪಸ್ಸಾಗುವ ವೇಳೆ ಅವರ ವಾಹನ ಲ್ಯಾಂಡ್‌ಮೈನ್ ಸ್ಫೋಟಕ್ಕೆ ಒಳಗಾಗಿದ್ದು, ಘಟನೆಯಲ್ಲಿ 15 ಸೈನಿಕರು ಹುತಾತ್ಮರಾಗಿದ್ದರೆ, ಇಬ್ಬರು ಮಾತ್ರ ಬದುಕುಳಿದಿದ್ದರು. ಬದುಕುಳಿದವರಲ್ಲಿ ಶ್ಯಾಮರಾಜ್ ಕೂಡ ಒಬ್ಬರಾಗಿದ್ದು, ಬೆನ್ನುಮೂಳೆಯ ಗಂಭೀರ ಗಾಯದಿಂದ ಅವರು ಸಂಪೂರ್ಣ ವಿಕಲಾಂಗರಾಗಿದ್ದಾರೆ.

ಶ್ಯಾಮರಾಜ್ ಅವರ ಪತ್ನಿ ಮಿಲಿಟರಿ ನರ್ಸಿಂಗ್ ಸೇವೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ವರ್ಗಾವಣೆ ಹಿನ್ನೆಲೆಯಲ್ಲಿ ಕುಟುಂಬ ಸಮೇತರಾಗಿ ಪ್ರಯಾಣಿಸುತ್ತಿದ್ದ ವೇಳೆ ಸಾಸ್ತಾನ ಟೋಲ್ ಮೂಲಕ ಸಾಗುವಾಗ ಟೋಲ್ ವಿನಾಯಿತಿ ಪತ್ರವಿದ್ದರೂ ಸಿಬ್ಬಂದಿಗಳು ವಿನಾಯಿತಿ ನೀಡಲು ನಿರಾಕರಿಸಿ ಸಾರ್ವಜನಿಕರ ಎದುರು ನಿಂದಿಸಿ ಅವಮಾನಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಲು ಹಿಂಜರಿಯದ ಸೈನಿಕರಿಗೆ ಈ ರೀತಿ ಅವಮಾನ ಮಾಡುವುದು ದೇಶಕ್ಕೆ ಮಾಡಿದ ಅವಮಾನ ಹಾಗೂ ದೇಶದ್ರೋಹದ ಸಮಾನ ಎಂದು ಮಾಜಿ ಸೈನಿಕರ ಸಂಘ ಆಕ್ರೋಶ ವ್ಯಕ್ತಪಡಿಸಿದೆ.
ಈ ಸಂಬಂಧ ಸಾಸ್ತಾನ ಟೋಲ್ ಯೋಜನಾ ಪ್ರಾಧಿಕಾರದ ಅಬ್ದುಲ್ ಜಾವೀದ್, ಜಗನ್ ಮೋಹನ್ ರೆಡ್ಡಿ, ಇಂದಿನ ಟೋಲ್ ಮ್ಯಾನೇಜರ್ ಬಾಬು, ಟೋಲ್ ಮ್ಯಾನೇಜರ್ ತಿಮ್ಮಯ್ಯ ಹಾಗೂ ಸಿಬ್ಬಂದಿಗಳಾದ ಸುರೇಶ್ ಮತ್ತು ಶಿವನಾಗ ಎಂಬ ಆರು ಮಂದಿಯ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಕೋಟ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಲಾಗಿದೆ.

ದೂರು ಸ್ವೀಕರಿಸಿದ ಉಡುಪಿ ಡಿವೈಎಸ್ಪಿ ಪ್ರಭು ಡಿ.ಟಿ. ಅವರು ಪ್ರತಿಕ್ರಿಯಿಸಿ, ದೂರಿನಲ್ಲಿ ಕೆಲವು ಸೆಕ್ಷನ್‌ಗಳು ತಕ್ಷಣವೇ ಪ್ರಕರಣ ದಾಖಲಿಸಲು ಅನ್ವಯವಾಗದ ಕಾರಣ ದೂರು ಸ್ವೀಕರಿಸಲಾಗಿದೆ. ಸಂಬಂಧಪಟ್ಟವರಿಗೆ ನೋಟೀಸ್ ಜಾರಿ ಮಾಡಿ ವಿಚಾರಣೆ ನಡೆಸಿದ ಬಳಿಕ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ದೂರುದಾರರಿಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಕೋಟ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಪ್ರವೀಣ್ ಕುಮಾರ್ ಆರ್. ಠಾಣಾ ಎಸ್ಐ ಮಾಂತೇಶ್ ಜಾಭಗೌಡ, ಮಾಜಿ ಸೈನಿಕರಾದ ಕೇಶವ ಮಲ್ಪೆ, ಚಂದ್ರ ಅಮೀನ್,ಆನಂದ್ ಎಸ್ ಸಾಸ್ತಾನ, ಅಶೋಕ, ಸುರೇಶ್
ಹೆದ್ದಾರಿ ಹೋರಾಟ ಸಮಿತಿಯ ಶ್ಯಾಮ್ ಸುಂದರ್ ನಾಯಿರಿ, ವಿಠಲ್ ಪೂಜಾರಿ, ಪ್ರತಾಪ್ ಶೆಟ್ಟಿ, ದಿನೇಶ್ ಗಾಣಿಗ, ನಾಗರಾಜ್ ಗಾಣಿಗ, ರವೀಂದ್ರ ತಿಂಗಳಾಯ, ರತ್ನಾಕರ ಬಾರಿಕೆರೆ, ಕೋಟ ಕೀರ್ತೀಶ್ ಪೂಜಾರಿ ಮೊದಲದವರು ಇದ್ದರು.