
ಡೈಲಿ ವಾರ್ತೆ:ಜನವರಿ/28/2026
TRAI–ಪೊಲೀಸ್ ಹೆಸರಿನಲ್ಲಿ ಸೈಬರ್ ವಂಚನೆ: ಉಡುಪಿ ವ್ಯಕ್ತಿಯಿಂದ ₹40 ಲಕ್ಷ ಲೂಟಿ

ಉಡುಪಿ: ಟೆಲಿಫೋನ್ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI), ಮುಂಬೈ ಕೊಲಾಬಾ ಪೊಲೀಸ್ ಠಾಣೆ ಹಾಗೂ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳೆಂದು ನಂಬಿಸಿ ಉಡುಪಿ ನಿವಾಸಿಯೊಬ್ಬರಿಂದ ₹40 ಲಕ್ಷ ಹಣವನ್ನು ಆನ್‌ಲೈನ್ ಮೂಲಕ ವಂಚಿಸಿದ ಗಂಭೀರ ಸೈಬರ್ ಅಪರಾಧ ಬೆಳಕಿಗೆ ಬಂದಿದೆ.
ಕಟಪಾಡಿ ಮೂಡಬೆಟ್ಟು ನಿವಾಸಿ ಕೆ. ರಾಘವೇಂದ್ರ ರಾವ್ (45) ಅವರು ಈ ಸಂಬಂಧ ಸೈಬರ್ ಅಪರಾಧ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.
ದಿನಾಂಕ 11-01-2026 ರಂದು ಮಧ್ಯಾಹ್ನ 3 ಗಂಟೆಯ ಸುಮಾರಿಗೆ ವಿದೇಶಿ ನಂಬರಿನಿಂದ ಕರೆ ಬಂದಿದ್ದು, ಕರೆ ಮಾಡಿದವರು ತಾವು TRAI ಅಧಿಕಾರಿಗಳೆಂದು ಹೇಳಿಕೊಂಡು, ಕೆ. ರಾಘವೇಂದ್ರ ರಾವ್ ಅವರ ಮೊಬೈಲ್ ಸಂಖ್ಯೆಯಿಂದ ಅಕ್ರಮ ಚಟುವಟಿಕೆ ಹಾಗೂ ಬೆದರಿಕೆ ಕರೆಗಳು ನಡೆದಿವೆ ಎಂದು ಭಯ ಹುಟ್ಟಿಸಿದ್ದಾರೆ.
ಅಲ್ಲದೇ ಮುಂಬೈ ಕೊಲಾಬಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಹೇಳಿ, ಕರೆಯನ್ನು ಅಲ್ಲಿನ ಪೊಲೀಸ್ ಅಧಿಕಾರಿಗಳೆಂದು ಹೇಳಿಕೊಂಡವರ ಬಳಿ ವರ್ಗಾಯಿಸಿದ್ದಾರೆ. ನಂತರ ಪೊಲೀಸ್ ಸಮವಸ್ತ್ರದಲ್ಲಿದ್ದ ವ್ಯಕ್ತಿಯೊಬ್ಬ ವೀಡಿಯೋ ಕಾಲ್ ಮೂಲಕ ತನಿಖಾಧಿಕಾರಿಯೆಂದು ಪರಿಚಯಿಸಿಕೊಂಡು, ಕೆನರಾ ಬ್ಯಾಂಕ್ ಕೊಲಾಬಾದಲ್ಲಿ ತೆರೆಯಲಾಗಿದ್ದ ಅಕ್ರಮ ಖಾತೆ, ₹4.90 ಕೋಟಿ ಹಣ ವರ್ಗಾವಣೆ, ನರೇಶ್ ಗೋಯಲ್ ಹಣಕಾಸು ದಂಧೆ ಪ್ರಕರಣದ ಸಂಪರ್ಕ ಇತ್ಯಾದಿಗಳನ್ನು ಉಲ್ಲೇಖಿಸಿ ಬಂಧನದ ಬೆದರಿಕೆ ಒಡ್ಡಿದ್ದಾನೆ.
ಈ ಮೂಲಕ ಕೆ. ರಾಘವೇಂದ್ರ ರಾವ್ ಅವರಿಂದ ಹಾಗೂ ಅವರ ಪತ್ನಿಯ ಬ್ಯಾಂಕ್ ಖಾತೆಗಳಿಂದ “ಫಂಡ್ ಫಂಡ್ ವೆರಿಫಿಕೇಶನ್” ನೆಪದಲ್ಲಿ ಹಂತ ಹಂತವಾಗಿ ಹಣ ವರ್ಗಾಯಿಸಿಕೊಂಡಿದ್ದು, ದಿನಾಂಕ 16, 19 ಹಾಗೂ 23 ಜನವರಿ 2026 ರಂದು ಒಟ್ಟು ₹40,00,000 ಮೊತ್ತವನ್ನು ವಿವಿಧ ಖಾತೆಗಳಿಗೆ ವರ್ಗಾಯಿಸಿಕೊಂಡು ವಂಚಿಸಿದ್ದಾರೆ.
ಈ ಕುರಿತು ಉಡುಪಿ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 09/2026ರಂತೆ ಐಟಿ ಕಾಯ್ದೆಯ ಕಲಂ 66(ಸಿ), 66(ಡಿ) ಹಾಗೂ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 318(4), 308(6) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿದಿದೆ.