
ಡೈಲಿ ವಾರ್ತೆ:ಜನವರಿ/28/2026
ಭಟ್ಕಳ| ಸ್ಕೂಟರ್ ಗೆ ಕಾರು ಡಿಕ್ಕಿ – ಓರ್ವ ಮೃತ್ಯು, ಮತ್ತೊಬ್ಬ ಗಂಭೀರ

ಭಟ್ಕಳ, ಜ.28: ಕಾರು ಹಾಗೂ ಸ್ಕೂಟರ್ ನಡುವೆ ನಡೆದ ಅಪಘಾತದಲ್ಲಿ ಸವಾರ ಸಾವನ್ನಪ್ಪಿ, ಸಹಸವಾರ ಗಂಭೀರ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ನಗರದ ಸಿಟಿ ಲೈಟ್ ಕ್ರಾಸ್ ಬಳಿ ಬುಧವಾರ ಸಂಭವಿಸಿದೆ.

ಮೃತರನ್ನು ಶೇರ್ವಾರ್ ನಿವಾಸಿ ತೌಸೀಫ್ (40) ಎಂದು ಗುರುತಿಸಲಾಗಿದ್ದು, ಇತ್ತೀಚೆಗೆ ಭಟ್ಕಳದ ಆಜಾದ್ ನಗರದಲ್ಲಿ ವಾಸಿಸುತ್ತಿದ್ದರು. ಗಂಭೀರವಾಗಿ ಗಾಯಗೊಂಡ ಯುವಕನನ್ನು ಭಟ್ಕಳ ಮದೀನಾ ಕಾಲೋನಿಯ ನಿವಾಸಿ ಉಮರ್ ರಶಾದ್ (20) ಎಂದು ಗುರುತಿಸಲಾಗಿದೆ.
ಬುಧವಾರ ಬೆಳಿಗ್ಗೆ ಸುಮಾರು 11 ಗಂಟೆಯ ವೇಳೆಗೆ, ಸಿಟಿ ಲೈಟ್ ಕ್ರಾಸ್‌ನಿಂದ ಶಂಸುದ್ದೀನ್ ವೃತ್ತದ ಕಡೆಗೆ ಸಾಗುತ್ತಿದ್ದ ಸ್ಕೂಟರ್‌ಗೆ, ಉಡುಪಿಯಿಂದ ಶಿರಸಿಯತ್ತ ತೆರಳುತ್ತಿದ್ದ ಕಾರು, ಲಾರಿಯನ್ನು ಹಿಂದಿಕ್ಕುವ ವೇಳೆ ವಿರುದ್ಧ ದಿಕ್ಕಿನಲ್ಲಿ ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಡಿಕ್ಕಿಯ ತೀವ್ರತೆಗೆ ಸ್ಕೂಟರ್ ಹಲವಾರು ಮೀಟರ್ ದೂರಕ್ಕೆ ಎಸೆಯಲ್ಪಟ್ಟಿದ್ದು, ಸ್ಕೂಟರ್ ಸವಾರರಿಬ್ಬರೂ ರಸ್ತೆ ಮಧ್ಯಕ್ಕೆ ಬಿದ್ದಿದ್ದಾರೆ.
ಅಪಘಾತದ ತಕ್ಷಣ ಸ್ಥಳೀಯರು ಗಾಯಾಳುಗಳನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದು, ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಇಬ್ಬರನ್ನೂ ಮಂಗಳೂರಿಗೆ ರವಾನಿಸಲಾಯಿತು. ಆದರೆ ಗಾಯಾಳುಗಳಲ್ಲಿ ಒಬ್ಬರಾದ ತೌಸೀಫ್ ಮಂಗಳೂರಿನ ಆಸ್ಪತ್ರೆಗೆ ತಲುಪುವ ಮೊದಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಮೃತದೇಹವನ್ನು ಭಟ್ಕಳಕ್ಕೆ ತರಲಾಗಿದೆ.
ಈ ಸಂಬಂಧ ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಅಪಘಾತದ ಕುರಿತು ತನಿಖೆ ಮುಂದುವರಿಸಿದ್ದಾರೆ.