
ಡೈಲಿ ವಾರ್ತೆ:ಜನವರಿ/28/2026
ರಸ್ತೆ ಅಪಘಾತಗಳಲ್ಲಿ ಯುವಕರು ಹೆಚ್ಚು ಬಲಿಯಾಗುತ್ತಿದ್ದಾರೆ – ಜಾಗೃತೆ ಅಗತ್ಯ: ಡಿವೈಎಸ್ಪಿ ಪ್ರಭು ಡಿ.ಟಿ.

ಕೋಟ: ರಸ್ತೆ ಅಪಘಾತಗಳಲ್ಲಿ ಯುವ ಸಮುದಾಯವೇ ಹೆಚ್ಚಿನ ಪ್ರಮಾಣದಲ್ಲಿ ಬಲಿಯಾಗುತ್ತಿರುವುದು ಕಳವಳಕಾರಿ ಬೆಳವಣಿಗೆಯಾಗಿದ್ದು, ಈ ಬಗ್ಗೆ ಪ್ರತಿಯೊಬ್ಬರೂ ಜಾಗೃತರಾಗಬೇಕಾಗಿದೆ ಎಂದು ಉಡುಪಿ ಉಪವಿಭಾಗದ ಡಿವೈಎಸ್ಪಿ ಪ್ರಭು ಡಿ.ಟಿ. ಅವರು ಹೇಳಿದರು.

ಬುಧವಾರ ಸಾಲಿಗ್ರಾಮದ ಶ್ರೀ ಗುರುನರಸಿಂಹ ದೇಗುಲದ ಜ್ಞಾನಮಂದಿರದಲ್ಲಿ, ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ–2026ರ ಅಂಗವಾಗಿ ಆಯೋಜಿಸಲಾದ ರಸ್ತೆ ಸುರಕ್ಷತೆ ಹಾಗೂ ಸೈಬರ್ ಅಪರಾಧಗಳ ಕುರಿತು ಜಾಗೃತಿ ಸಭೆ ಮತ್ತು ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಅವರು, ಪೋಷಕರು ಮಕ್ಕಳಿಗೆ ವಾಹನ ನೀಡುವ ಮುನ್ನ ಚಾಲನಾ ಪರವಾನಗಿ ಪಡೆದುಕೊಳ್ಳುವಂತೆ ಹಾಗೂ ಸಂಚಾರ ನಿಯಮಗಳ ಬಗ್ಗೆ ಕಡ್ಡಾಯ ಜಾಗೃತಿ ಮೂಡಿಸುವಂತೆ ಮನವಿ ಮಾಡಿದರು. ಬಲಿಷ್ಠ ಸಮಾಜ ನಿರ್ಮಾಣದಲ್ಲಿ ಯುವ ಸಮುದಾಯದ ಪಾತ್ರ ಅತ್ಯಂತ ಮಹತ್ವದ್ದೆಂದು ಅವರು ವಿವರಿಸಿದರು.
ಈ ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಪೊಲೀಸ್, ಉಡುಪಿ ಪೊಲೀಸ್ ಉಪವಿಭಾಗ, ಬ್ರಹ್ಮಾವರ ಪೊಲೀಸ್ ವೃತ್ತ, ಕೋಟ ಪೊಲೀಸ್ ಠಾಣೆ, ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆ, ಪಾರ್ವತಿ ಮಹಾಬಲ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಶಿರೂರು ಮುದ್ದು ಮನೆ ಕಣ್ಣಿನ ಆಸ್ಪತ್ರೆ ಇವರ ಜಂಟಿ ಆಶ್ರಯದಲ್ಲಿ, ಶ್ರೀಗುರುನರಸಿಂಹ ದೇವಸ್ಥಾನ ಸಾಲಿಗ್ರಾಮ, ಪಂಚವರ್ಣ ಸಂಘಟನೆ ಕೋಟ ಹಾಗೂ ರೋಟರಿ ಕ್ಲಬ್ ಕೋಟ–ಸಾಲಿಗ್ರಾಮ ಇವರ ಸಹಯೋಗದಲ್ಲಿ ಆಯೋಜಿಸಲಾಗಿತ್ತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಅಧ್ಯಕ್ಷ ಡಾ. ಕೆ.ಎಸ್. ಕಾರಂತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಕೋಟ–ಸಾಲಿಗ್ರಾಮ–ಸಾಸ್ತಾನ ಭಾಗದ ಹಿರಿಯ ಆಟೋ ಚಾಲಕರಾದ ರತ್ನಾಕರ ಪೈ ಕೋಟ, ವೆಂಕಟೇಶ ಪೂಜಾರಿ ಕೋಟ, ನಾರಾಯಣ ಪೂಜಾರಿ ಸಾಲಿಗ್ರಾಮ ಹಾಗೂ ನಾರಾಯಣ ಗುಂಡ್ಮಿ ಇವರನ್ನು ಗುರುತಿಸಿ ಗೌರವಿಸಲಾಯಿತು.

ಮುಖ್ಯ ಅತಿಥಿಗಳಾಗಿ ಪಾರ್ವತಿ ಮಹಾಬಲ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಶಿರೂರು ಮುದ್ದು ಮನೆ ಕಣ್ಣಿನ ಆಸ್ಪತ್ರೆಯ ಸಂಯೋಜಕ ಶಂಕರ್ ಶೆಟ್ಟಿ, ಕೋಟ ಸಮುದಾಯ ಆರೋಗ್ಯ ಕೇಂದ್ರದ ವೈದ್ಯೆ ಡಾ. ಯಶಶ್ರೀ ಶೆಟ್ಟಿ, ಉಡುಪಿ ಆರ್‌ಟಿಓ ಅಧಿಕಾರಿ ಲಕ್ಷ್ಮೀನಾರಾಯಣ ನಾಯಕ್, ಕೋಟ ಪೊಲೀಸ್ ಠಾಣೆಯ ಉಪನಿರೀಕ್ಷಕ ಪ್ರವೀಣ್ ಕುಮಾರ್ ಆರ್. ಉಪಸ್ಥಿತರಿದ್ದರು.




ಪತ್ರಕರ್ತ ರವೀಂದ್ರ ಕೋಟ ಸ್ವಾಗತಿಸಿ, ಪಂಚವರ್ಣದ ಸುಜಾತ ಬಾಯರಿ ನಿರೂಪಿಸಿದರು. ಕೋಟ ಠಾಣೆಯ ಎಸ್ಐ ಮಾಂತೇಶ್ ಜಾಭಗೌಡ ವಂದಿಸಿದರು. ಎಎಸ್‌ಐ ಗೋಪಾಲ ಪೂಜಾರಿ ಹಾಗೂ ಸಿಬ್ಬಂದಿ ಸಹಕರಿಸಿದರು.
ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಕೋಟ ಮೂರ್ ಕೈಯಿಂದ ಸಾಲಿಗ್ರಾಮದವರೆಗೆ ಕಾಲ್ನಡಿಗೆ ಜಾಥೆ ಹಮ್ಮಿಕೊಳ್ಳಲಾಗಿದ್ದು, ಕೋಟ ವಿವೇಕ ವಿದ್ಯಾಸಂಸ್ಥೆ, ಆಶ್ರೀತ್ ಸಮೂಹ ಶಿಕ್ಷಣ ಸಂಸ್ಥೆ, ಫಾರ್ಚುನ್ ಸೈನ್ಸ್ ಮಾಬುಕಳ ಹಾಗೂ ಇಸಿಆರ್ ಕಾಲೇಜಿನ ವಿದ್ಯಾರ್ಥಿಗಳು ಜಾಥೆಯಲ್ಲಿ ಭಾಗವಹಿಸಿದರು. ಜಾಥೆಗೆ ಕೋಟ ವಿವೇಕ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಕೆ. ಜಗದೀಶ ನಾವಡ ಚಾಲನೆ ನೀಡಿದರು.